ADVERTISEMENT

ಎನ್‌ಇಪಿಯಿಂದ ಶಿಕ್ಷಣ ಕಾರ್ಪೊರೇಟ್‌ ತೆಕ್ಕೆಗೆ: ಪ್ರೊ.ಬಿ.ಕೆ.ಚಂದ್ರಶೇಖರ್

ನೂತನ ಶಿಕ್ಷಣ ನೀತಿ, ಯುಜಿಸಿ ಕರಡು ನಿಯಮ ಅಪಾಯಕಾರಿ: ಪ್ರೊ.ಬಿ.ಕೆ.ಚಂದ್ರಶೇಖರ್ ಕಳವಳ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 15:55 IST
Last Updated 9 ಏಪ್ರಿಲ್ 2025, 15:55 IST
<div class="paragraphs"><p>ಪ್ರೊ.ಬಿ.ಕೆ.ಚಂದ್ರಶೇಖರ್</p></div>

ಪ್ರೊ.ಬಿ.ಕೆ.ಚಂದ್ರಶೇಖರ್

   

ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಮೂಲಕ ಕೇಂದ್ರ ಸರ್ಕಾರವು ಶಿಕ್ಷಣ ಕ್ಷೇತ್ರವನ್ನು ಕಾರ್ಪೊರೇಟ್ ತೆಕ್ಕೆಗೆ ನೀಡಲು ಹೊರಟಿದೆ. ವಿಶ್ವವಿದ್ಯಾಲಯಗಳ ಕುಲಪತಿ ನೇಮಕ ಸಂಬಂಧ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೊರಡಿಸಿರುವ ಕರಡು ನಿಯಮದ ಹಿಂದೆಯೂ ಇದೇ ಹುನ್ನಾರ ಇದೆ’ ಎಂದು ಶಿಕ್ಷಣ ತಜ್ಞ ಪ್ರೊ.ಬಿ.ಕೆ.ಚಂದ್ರಶೇಖರ್‌ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎನ್‌ಇಪಿ ಅಡಿ ಭಾರತೀಯ ಜ್ಞಾನ ಪರಂಪರೆಯನ್ನು ಬೋಧಿಸಿ, ಪುರಾಣಕಾಲದಲ್ಲೇ ವಿಮಾನ ತಂತ್ರಜ್ಞಾನ ಇತ್ತು ಎಂಬುದನ್ನೆಲ್ಲಾ ಮಕ್ಕಳಿಗೆ ಹೇಳಿಕೊಡಿ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇದಕ್ಕೆ ಒಪ್ಪದ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿಯು ಸುಮಾರು ₹950 ಕೋಟಿ ಅನುದಾನ ಕಡಿತ ಮಾಡಿದೆ’ ಎಂದರು.

ADVERTISEMENT

‘ಶಿಕ್ಷಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ರೂಪಿಸಿದ್ದ ಮಸೂದೆಗಳನ್ನು ವರ್ಷಗಳ ಕಾಲ ತಮ್ಮಲ್ಲಿಯೇ ಇರಿಸಿಕೊಂಡಿದ್ದ ಅಲ್ಲಿನ ರಾಜ್ಯಪಾಲ ಎನ್‌.ರವಿ ಅವರಿಗೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದೆ. ಕೇರಳದ ಹಿಂದಿನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಹ ಹೀಗೇ ಮಸೂದೆಗಳನ್ನು ಇರಿಸಿಕೊಂಡಿದ್ದರು. ಕೇಂದ್ರವು ತನ್ನ ಆಜ್ಞೆ ಪಾಲಿಸುವವರನ್ನೇ ರಾಜ್ಯಪಾಲರಾಗಿ ನೇಮಕ ಮಾಡುತ್ತಿದೆ. ಇದೂ ಸಹ ಅದರ ಹುನ್ನಾರದ ಭಾಗ’ ಎಂದು ಆರೋಪಿಸಿದರು.

‘ಇವೆಲ್ಲವನ್ನೂ ರಾಜ್ಯ ಸರ್ಕಾರ ಕಟುವಾಗಿ ಟೀಕಿಸುತ್ತಿದೆ. ಅದರ ಜತೆಗೆ ರಾಜ್ಯದ ವಿಶ್ವವಿದ್ಯಾಲಯಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಬಲ‍ಪಡಿಸುವ ಕೆಲಸ ಮಾಡಬೇಕು. ಅವುಗಳಿಗೆ ಅನುದಾನ ಒದಗಿಸಬೇಕು’ ಎಂದು ಆಗ್ರಹಿಸಿದರು.

ಕುಲಪತಿ ನೇಮಕ ಅಧಿಕಾರ ವಿ.ವಿಗಳಿಗಿರಲಿ’

‘ಕುಲಪತಿ ನೇಮಕ ಅಧಿಕಾರ ರಾಜ್ಯಪಾಲರ ಬಳಿ ಇರಬೇಕೇ ಅಥವಾ ಮುಖ್ಯಮಂತ್ರಿಯ ಬಳಿ ಇರಬೇಕೇ ಎಂಬುದು ಈಗ ರಾಜ್ಯದಲ್ಲಿ ಚರ್ಚೆಯಲ್ಲಿರುವ ವಿಚಾರ. ಮುಖ್ಯಮಂತ್ರಿಗೆ ಈ ಅಧಿಕಾರ ನೀಡುವ ಮಸೂದೆಯನ್ನು ರಾಜ್ಯಪಾಲ ವಾಪಸ್‌ ಕಳುಹಿಸಿದ್ದಾರೆ. ಇದು ಸಂಘರ್ಷಕ್ಕೆ ಕಾರಣವಾಗಿದೆ. ಆದರೆ ಕುಲಪತಿ ನೇಮಕ ಅಧಿಕಾರವನ್ನು ವಿಶ್ವವಿದ್ಯಾಲಯಗಳಿಗೇ ನೀಡುವುದು ಸೂಕ್ತ’ ಎಂದು ಪ್ರೊ.ಬಿ.ಕೆ.ಚಂದ್ರಶೇಖರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.