ADVERTISEMENT

ಚರ್ಮದ ಮೇಲೆ ಕಪ್ಪು ಶಿಲೀಂದ್ರ!

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 11:19 IST
Last Updated 1 ಜೂನ್ 2021, 11:19 IST
ಚಿತ್ರದುರ್ಗದ ವ್ಯಕ್ತಿಯೊಬ್ಬರ ಬಲ ಕಿವಿಯ ಮೇಲೆ ಬೆಳೆದ ಕಪ್ಪು ಶಿಲೀಂದ್ರ.
ಚಿತ್ರದುರ್ಗದ ವ್ಯಕ್ತಿಯೊಬ್ಬರ ಬಲ ಕಿವಿಯ ಮೇಲೆ ಬೆಳೆದ ಕಪ್ಪು ಶಿಲೀಂದ್ರ.   

ಚಿತ್ರದುರ್ಗ: ಕೋವಿಡ್‌ನಿಂದ ಗುಣಮುಖರಾಗಿದ್ದ ವ್ಯಕ್ತಿಯೊಬ್ಬರ ಕಿವಿಯಲ್ಲಿ ಕಪ್ಪು ಶಿಲೀಂದ್ರ ಕಾಣಿಸಿಕೊಂಡಿದೆ. ಚರ್ಮದ ಮೇಲೆ ಶಿಲೀಂದ್ರ ಬೆಳೆದ ಮೊದಲ ಪ್ರಕರಣ ಇದಾಗಿದೆ.

ಕಪ್ಪು ಶಿಲೀಂದ್ರದಿಂದ ಹಾಳಾಗಿದ್ದ ಚರ್ಮವನ್ನು ಡಾ.ಎನ್‌.ಬಿ.ಪ್ರಹ್ಲಾದ್‌ ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಿದೆ. ಹಾನಿಗೊಂಡಿರುವ ಚರ್ಮವನ್ನು ಸಂಪೂರ್ಣವಾಗಿ ತೆಗೆದುಹಾಕಿ ಚರ್ಮದ ಕಸಿ ಮಾಡಲು ಸಿದ್ಧತೆ ನಡೆಸಿದೆ.

ಚಿತ್ರದುರ್ಗದ 54 ವರ್ಷದ ವ್ಯಕ್ತಿಯೊಬ್ಬರು ತಿಂಗಳ ಹಿಂದೆ ಕೋವಿಡ್‌ನಿಂದ ಗುಣಮುಖರಾಗಿದ್ದರು. ಮಧುಮೇಹ ತೀವ್ರವಾಗಿ ಬಾಧಿಸುತ್ತಿದ್ದರಿಂದ ಗುಣಮುಖರಾಗಲು ಕೆಲ ಸಮಯ ಹಿಡಿದಿತ್ತು. ಬಲಭಾಗದ ಕಿವಿಯ ಮೇಲ್ಭಾಗದ ಚರ್ಮವೂ ಕಪ್ಪಾಗಿತ್ತು. ಇದರಿಂದ ಅತೀವ ನೋವು ಕಾಣಿಸಿಕೊಂಡು, ಚಿಕಿತ್ಸೆಗಾಗಿ ಕರ್ನಾಟಕ ಕಿವಿ, ಮೂಗು ಹಾಗೂ ಗಂಟಲು ಆಸ್ಪತ್ರೆಗೆ ಬಂದಾಗ ಕಪ್ಪು ಶಿಲೀಂದ್ರ ಎಂಬುದು ಖಚಿತವಾಗಿದೆ.

ADVERTISEMENT

‘ಕಪ್ಪು ಶಿಲೀಂದ್ರ ಸಾಮಾನ್ಯವಾಗಿ ಮೂಗಿನಿಂದ ಪ್ರಾರಂಭವಾಗಿ ಕಣ್ಣು ಹಾಗೂ ಮಿದುಳಿಗೆ ವ್ಯಾಪಿಸುತ್ತದೆ. ಉತ್ತರ ಭಾರತದ ಕೆಲವೆಡೆ ಶ್ವಾಸಕೋಶಕ್ಕೂ ಹಾನಿಯುಂಟು ಮಾಡಿದೆ. ಆದರೆ, ಇದೇ ಮೊದಲ ಬಾರಿಗೆ ಚರ್ಮದ ಮೇಲೆ ಶಿಲೀಂದ್ರ ಬೆಳೆದಿದೆ. ಮಾಸ್ಕ್‌ ಧರಿಸಿದ್ದರಿಂದ ಚರ್ಮ ಕಪ್ಪಾಗಿರಬಹುದೆಂದು ರೋಗಿ ನಿರ್ಲಕ್ಷ್ಯ ಮಾಡಿದ್ದರಿಂದ ರೋಗದ ತೀವ್ರತೆ ಹೆಚ್ಚಾಗಿದೆ’ ಎಂದು ವೈದ್ಯ ಡಾ.ಎನ್‌.ಬಿ.ಪ್ರಹ್ಲಾದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.