ADVERTISEMENT

ಅಭಿಮಾನಿಗೆ ಚಪ್ಪಲಿ ಕೊಡಿಸಿದ ಬಿಎಸ್‌ವೈ!

ಯಡಿಯೂರಪ್ಪ ಸಿಎಂ ಆಗುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದ ಅಭಿಮಾನಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 14:27 IST
Last Updated 9 ಸೆಪ್ಟೆಂಬರ್ 2019, 14:27 IST
ಹೊಸ ಚಪ್ಪಲಿ ಧರಿಸಿ ಮುಖ್ಯಮಂತ್ರಿಗಳ ಆಶೀರ್ವಾದ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತ ಶಿವಕುಮಾರ್‌ ಆರಾಧ್ಯ (ಎಡ ಭಾಗದಲ್ಲಿ ಕುಳಿತವರು)
ಹೊಸ ಚಪ್ಪಲಿ ಧರಿಸಿ ಮುಖ್ಯಮಂತ್ರಿಗಳ ಆಶೀರ್ವಾದ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತ ಶಿವಕುಮಾರ್‌ ಆರಾಧ್ಯ (ಎಡ ಭಾಗದಲ್ಲಿ ಕುಳಿತವರು)   

ಮಂಡ್ಯ: ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ದೇವರ ಮುಂದೆ ಶಪಥ ಮಾಡಿದ್ದ ಅಭಿಮಾನಿಯೊಬ್ಬರಿಗೆ ಸ್ವತಃ ಮುಖ್ಯಮಂತ್ರಿಗಳೇ ಸೋಮವಾರ ಚಪ್ಪಲಿ ಕೊಡಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ, ಕೆರಗೋಡು ಶಕ್ತಿ ಕೇಂದ್ರದ ಅಧ್ಯಕ್ಷ ಶಿವಕುಮಾರ್‌ ಆರಾಧ್ಯ 2018ರ ವಿಧಾನಸಭಾ ಚುನಾವಣೆ ವೇಳೆ ನಗರದ ಕಾಳಿಕಾಂಬಾ ದೇವಾಲಯದ ಎದುರು ಶಪಥ ಮಾಡಿ ಚಪ್ಪಲಿ ತ್ಯಜಿಸಿದ್ದರು. ಚುನಾವಣೆ ನಂತರ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಸ್ಥಾನ ಅಲುಗಾಡುತ್ತಿದ್ದ ಕಾರಣ ಆಗಲೂ ಶಿವಕುಮಾರ್ ಚಪ್ಪಲಿ ಧರಿಸಲಿಲ್ಲ. ಕಳೆದ 2.2 ವರ್ಷದಿಂದಲೂ ಅವರು ಬರಿಗಾಲಿನಲ್ಲೇ ಓಡಾಡುತ್ತಿದ್ದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಿವಕುಮಾರ್‌ ಸೋಮವಾರ ಬೆಂಗಳೂರಿನ ಡಾಲರ್ಸ್‌ ಕಾಲೊನಿ ನಿವಾಸದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು.

ADVERTISEMENT

‘ಅಪ್ಪಾಜಿ (ಯಡಿಯೂರಪ್ಪ) ನಿವಾಸಕ್ಕೆ ತೆರಳಿದ್ದಾಗ ಸಂಸದೆ ಶೋಭಾ ಕರಂದ್ಲಾಜೆ ಅಕ್ಕನವರೂ ಅಲ್ಲೇ ಇದ್ದರು. ಬರಿಗಾಲಿನಲ್ಲಿ ಇದ್ದುದ್ದನ್ನು ಕಂಡ ಶೋಭಕ್ಕ ನನಗೆ ಚಪ್ಪಲಿ ಕೊಡಿಸುವಂತೆ ಅಪ್ಪಾಜಿಯನ್ನು ಕೇಳಿದರು. ಅಪ್ಪಾಜಿಯ ಸೂಚನೆ ಮೇರೆಗೆ ಶೋಭಕ್ಕ ಅವರೇ ನನ್ನನ್ನು ಅವರ ಕಾರಿನಲ್ಲಿ ಕರೆದೊಯ್ದು ಚಪ್ಪಲಿ ಕೊಡಿಸಿದರು. ನಂತರ ಅಪ್ಪಾಜಿ ಸಮ್ಮುಖದಲ್ಲೇ ಕಾಲಿಗೆ ಹಾಕಿಸಿದರು. ಅಪ್ಪಾಜಿ ಪ್ರೀತಿಯಿಂದ ನನಗೆ ಎರಡು ಏಟು ಹೊಡೆದು ಮುಂದೆ ಹೀಗೆಲ್ಲಾ ಮಾಡಬೇಡ ಎಂದರು. ಆದರೆ, ನಾನು ಮುಂದೆ ಈ ಚಪ್ಪಲಿಗಳನ್ನು ಧರಿಸುವುದಿಲ್ಲ. ನಮ್ಮ ಮನೆಯ ಶೋ ಕೇಸ್‌ನಲ್ಲಿ ಇಡುತ್ತೇನೆ ಎಂದು ಶಿವಕುಮಾರ್‌ ಆರಾಧ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.