ADVERTISEMENT

ಯಡಿಯೂರಪ್ಪ–ಕುಮಾರಸ್ವಾಮಿ ಒಳ ಒಪ್ಪಂದ: ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 14:33 IST
Last Updated 29 ಅಕ್ಟೋಬರ್ 2019, 14:33 IST
   

ಬೆಳಗಾವಿ: ‘ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ಬಗ್ಗೆ ಮೃದು ಧೋರಣೆ ತಾಳಿರುವುದನ್ನು ಗಮನಿಸಿದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಂತಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್‌ನ ಕೆಲವು ಶಾಸಕರು ಬಿಜೆಪಿಗೆ ಹೋಗಲು ಮುಂದಾಗಿದ್ದಾರೆ. ಹೀಗಾಗಿ, ಅವರ ಮೂಗಿಗೆ ತುಪ್ಪ ಸವರುವ ಉದ್ದೇಶದಿಂದ ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ; ನಾನೇ ಬೆಂಬಲ ಕೊಡುತ್ತೇನೆ ಎನ್ನುತ್ತಿದ್ದಾರೆ’ ಎಂದು ಟೀಕಿಸಿದರು.

‘ಕುಮಾರಸ್ವಾಮಿಗೆ ಐ.ಟಿ (ಆದಾಯ ತೆರಿಗೆ ಇಲಾಖೆ) ಅಥವಾ ಇ.ಡಿ (ಜಾರಿ ನಿರ್ದೇಶನಾಲಯ) ಭಯವಿರುವ ಕುರಿತು ನನಗೆ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಸರ್ಕಾರ ಬೀಳಿಸುವ ಅಭ್ಯಾಸವಿರುವುದು ಎಚ್‌.ಡಿ. ದೇವೇಗೌಡರ ಕುಟುಂಬದವರಿಗೇ ಹೊರತು ನನಗಿಲ್ಲ. ನಾನು ಯಾವತ್ತೂ ಅಧಿಕಾರದ ಕನಸು ಕಂಡವನಲ್ಲ. ಉಪಚುನಾವಣೆಯಲ್ಲಿ ಬಿಜೆಪಿಯವರು 8 ಸೀಟುಗಳನ್ನು ಪಡೆಯದಿದ್ದರೆ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಆಗ, ಬಿ.ಎಸ್. ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದೆ. ಚುನಾವಣೆ ಬಂದರೆ ನಾವೇನು ಹೆದರಿ ಓಡಿ ಹೋಗುವುದಿಲ್ಲ’ ಎಂದರು.

‘ವಿಧಾನಸಭೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಕ್ಕೆ ಜಗದೀಶ ಶೆಟ್ಟರ್‌ ಅವರಿಗೆ ತೀವ್ರ ಅಸಮಾಧಾನವಿದೆ. ಮುಖ್ಯಮಂತ್ರಿಯಾಗಿದ್ದ ನನಗೆ ಪ್ರಾಮುಖ್ಯತೆ ನೀಡಲಿಲ್ಲ ಎಂಬ ಬೇಸರ ಅವರದು. ಹೀಗಾಗಿ, ಅವರು ಸಂತ್ರಸ್ತರ ಕಷ್ಟ ಕೇಳುತ್ತಿಲ್ಲ. ಬೇಸರವಿದ್ದರೆ ಹೈಕಮಾಂಡ್‌ ಜೊತೆ ಗುದ್ದಾಡಬೇಕು. ಆಗಲಿಲ್ಲವೆಂದರೆ ಸಚಿವ ಸ್ಥಾನವನ್ನಾದರೂ ಬಿಡಬೇಕು’ ಎಂದು ಹೇಳಿದರು.

‘ನೆರೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ಬೃಹತ್‌ ಪಾದಯಾತ್ರೆ ನಡೆಸಬೇಕು ಎನ್ನುವ ಚರ್ಚೆ ಇದೆ. ಆದರೆ, ಅಂತಿಮವಾಗಿಲ್ಲ’ ಎಂದರು.

‘ಉಪ ಚುನಾವಣೆಗೆ ಸಂಬಂಧಿಸಿದಂತೆ, ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. 15ರಲ್ಲಿ ಈಗಾಗಲೇ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.