ADVERTISEMENT

ಅನಗತ್ಯ ಟೀಕೆ ಮಾಡುವ ಸಿದ್ದರಾಮಯ್ಯ ಅವರೇ ನಮ್ಮ ಗುರಿ: ಬಿ.ಎಸ್.ಯಡಿಯೂರಪ್ಪ

ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಹೋರಾಟವಿಲ್ಲ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 9:20 IST
Last Updated 3 ನವೆಂಬರ್ 2019, 9:20 IST
ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)
ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)   

ಬೆಂಗಳೂರು:ಬದಲಾದ ಸನ್ನಿವೇಶದಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನಮ್ಮ ಹೋರಾಟವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬಿಜೆಪಿ ಸರ್ಕಾರ ನೂರು ದಿನ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಅನಗತ್ಯ ಟೀಕೆ ಮಾಡಿ ಗೊಂದಲ ಉಂಟು ಮಾಡುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ನಮ್ಮ ಗುರಿ’ ಎಂದರು.

‘ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಪಾಡಿಗೆ ಪಕ್ಷ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರೂ ನನ್ನ ಸ್ನೇಹಿತರೇ. ಆದರೆ ಸಿದ್ದರಾಮಯ್ಯನವರ ಇತ್ತೀಚಿನ ನಡವಳಿಕೆ ಸರಿ ಇಲ್ಲ. ಒಬ್ಬ ಪ್ರತಿಪಕ್ಷ ನಾಯಕನಾಗಿ ಅವರು ಸ್ಪೀಕರ್ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದು ಸರಿಯೇ?’ ಎಂದು ಬಿಎಸ್‌ವೈ ಪ್ರಶ್ನಿಸಿದರು.

ಪ್ರವಾಹಪೀಡಿತ ಪ್ರದೇಶಗಳ ಬಗ್ಗೆ ಕನ್ನಡ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದಾಗ ಅದು ಸರಿಯಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು. ಯಾವುದು ಸರಿ ಇಲ್ಲ ಎನ್ನಬೇಕಲ್ಲವೇ? ಸುಮ್ಮನೆ ಆರೋಪ ಮಾಡುವುದು ಸರಿಯೇ? ನೀವು ಕೊಟ್ಟಿರುವ ಅಂಕಿಅಂಶ ಸರಿಯಿಲ್ಲ, ನಮ್ಮ ಕಾಲದಲ್ಲಿ ಇಷ್ಟು ಮಾಡಿದ್ದೇವೆ ಎಂದು ಉದಾಹರಣೆ ನೀಡಲಿ ನೋಡೋಣ ಎಂದು ಸವಾಲೆಸೆದರು.

ಇಡೀ ದೇಶ ಅಚ್ಚರಿ ಪಡುವ ರೀತಿಯಲ್ಲಿ ನೆರೆಪೀಡಿತರಿಗೆ ಒಂದೊಂದು ಎಕರೆಗೆ ₹ 10 ಸಾವಿರದಂತೆ ಪರಿಹಾರ ನೀಡುತ್ತಿದ್ದೇವೆ. ಮನೆ ಕಟ್ಟಲು ₹ 90–95 ಸಾವಿರ ನೀಡುವಲ್ಲಿ ₹ 5 ಲಕ್ಷ ಪರಿಹಾರ ನೀಡುತ್ತಿದ್ದೇವೆ. ಬಾಡಿಗೆ ಕಟ್ಟಲು ₹ 5,000ದಂತೆ 9 ತಿಂಗಳಿಗೆ ನೀಡುತ್ತಿದ್ದೇವೆ. ಶೆಡ್‌ಗಳನ್ನು ಮಾಡಿಸಿಕೊಡುತ್ತಿದ್ದೇವೆ. ಇಷ್ಟಿದ್ದರೂ ತೃಪ್ತಿ ಇಲ್ಲವೆಂದರೆ? ತೊಂದರೆಯಾದ 24 ಗಂಟೆಗಳಲ್ಲಿ ಬಟ್ಟೆಬರೆ ತೆಗೆದುಕೊಳ್ಳಲು ಪ್ರತಿಯೊಬ್ಬರಿಗೂ ₹ 10 ಸಾವಿರದಂತೆ ನೀಡಲಾಗಿದೆ. ಯಾರು ಮಾಡಿದ್ದಾರೆ ಇಷ್ಟು ಕೆಲಸ, ಒಂದು ಉದಾಹರಣೆ ಕೊಡಿ ಎಂದು ಯಡಿಯೂರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.