ADVERTISEMENT

‘ನೂರು ದಿನಗಳೂ ‘ಅಗ್ನಿಪರೀಕ್ಷೆ’: ಮುಂದಿನ 100 ದಿನಗಳಲ್ಲಿ ರಾಜ್ಯದ ಚಿತ್ರಣ ಬದಲು’

ಪ್ರಗತಿಯ ವರದಿ ಬಿಡುಗಡೆ ಮಾಡಿ ಬಿಎಸ್‌ವೈ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 19:35 IST
Last Updated 5 ನವೆಂಬರ್ 2019, 19:35 IST
‘ದಿನ ನೂರು ಸಾಧನೆ ನೂರಾರು’ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದರು. ಸಚಿವ ಜೆ.ಸಿ. ಮಾಧುಸ್ವಾಮಿ, ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಇದ್ದಾರೆ
‘ದಿನ ನೂರು ಸಾಧನೆ ನೂರಾರು’ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದರು. ಸಚಿವ ಜೆ.ಸಿ. ಮಾಧುಸ್ವಾಮಿ, ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಇದ್ದಾರೆ   

ಬೆಂಗಳೂರು: ‘ಸರ್ಕಾರಕ್ಕೆ ನೂರು ದಿನಗಳು ಅಗ್ನಿಪರೀಕ್ಷೆಯಾಗಿತ್ತು. ಆ ನೂರೂ ದಿನಗಳನ್ನು ಖುಷಿಯಿಂದ ಕಳೆಯಲಿಲ್ಲ. ಸ್ವಂತಕ್ಕೆ ಬಳಸಲಿಲ್ಲ ಜನರ ನೋವಿನಲ್ಲಿ ಬೆರೆಯುವ, ಕಣ್ಣೀರೊರೆಸುವ ಕೆಲಸ ಮಾಡಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾವುಕರಾಗಿ ನುಡಿದರು.

‘ಮುಂದಿನ 100 ದಿನಗಳಲ್ಲಿ ಕರ್ನಾಟಕ ಮತ್ತು ಬೆಂಗಳೂರಿನ ಚಿತ್ರಣವನ್ನೇ ಬದಲಿಸುತ್ತೇನೆ. ಈ ದಿಸೆಯಲ್ಲಿ ಒಂದು ಕ್ಷಣ ವಿರಮಿಸದೇ ಶ್ರಮವಹಿಸುತ್ತೇನೆ’ ಎಂದು ಅವರು ‘ದಿನ ನೂರು ಸಾಧನೆ ನೂರಾರು’ 100 ದಿನಗಳ ಆಡಳಿತದ ಪ್ರಗತಿಯ ವರದಿ ಬಿಡುಗಡೆ ಮಾಡಿ ಮಾತನಾಡಿದರು.

ಈ ಕುರಿತು ಹಮ್ಮಿಕೊಂಡಿರುವ ಹೊಸ ಯೋಜನೆ ಮತ್ತು ಕಾರ್ಯಕ್ರಮಗಳೇನು ಎಂಬ ಪ್ರಶ್ನೆಗೆ, ಹೊಸ ಕಾರ್ಯಕ್ರಮಗಳನ್ನು ಈಗಲೇ ಹೇಳುವುದಿಲ್ಲ, ಮುಂಬರುವ ಬಜೆಟ್‌ನಲ್ಲಿ ವಿವರಿಸುತ್ತೇನೆ ಎಂದು ಹೇಳಿದರು.

ADVERTISEMENT

’ರಾಜ್ಯದ ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ ಮತ್ತು ಪ್ರವಾಹ ಬಂದಿತ್ತು. ಒಂದು ತಿಂಗಳ ಕಾಲ ಹಗಲು ರಾತ್ರಿ ಎನ್ನದೇ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದೆ. ಅಲ್ಲಿಯೇ ಉಳಿದೆ. ಸಂತ್ರಸ್ತರು ನೆಮ್ಮದಿಯಿಂದ ಬದುಕು ಸಾಗಿಸಲು ವ್ಯವಸ್ಥೆ ಮಾಡಿಕೊಟ್ಟಿದ್ದೀವೆ. ಹಿಂದೆ ಸಾಕಷ್ಟು ಬಾರಿ ನೈಸರ್ಗಿಕ ವಿಕೋಪ ಸಂಭವಿಸಿತ್ತು. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಪರಿಹಾರವನ್ನು ಯಾರೂ ಕೊಟ್ಟಿಲ್ಲ. ಇದು ಸಾಧನೆಯಲ್ಲವೆ’ ಎಂದು ಅವರು ಪ್ರಶ್ನಿಸಿದರು.

ಮುಂದಿನ ಆದ್ಯತೆಗಳು: ಮುಂಬರುವ ದಿನಗಳಲ್ಲಿ ಕೃಷಿ, ನೀರಾವರಿ, ವಸತಿ, ಕೈಗಾರಿಕೆ ಮತ್ತು ಬೆಂಗಳೂರು ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

’ನಿಮ್ಮ ಸರ್ಕಾರಕ್ಕೆ ಶೂನ್ಯ ಅಂಕ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಿಮ್ಮ ಸರ್ಕಾರ ನೀವು ಎಷ್ಟು ಅಂಕ ಕೊಡುತ್ತೀರಿ ಎಂಬ ಪ್ರಶ್ನೆಗೆ, ಅಂಕ ಕೊಡುವ ಅಧಿಕಾರ ರಾಜ್ಯದ ಜನರಿಗಿದೆಯೇ ಹೊರತು ಬೇರೆ ಯಾರಿಗೂ ಇಲ್ಲ. ನನ್ನ ಸಂಪುಟ ಸಹೋದ್ಯೊಗಿಗಳಿಗೂ ಅಂಕ ನೀಡಲು ಹೋಗುವುದಿಲ್ಲ. ಅವರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದಾರೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅನರ್ಹ ಶಾಸಕರಿಗೆ ಕಡಿಮೆ ಹಣ: ಅನರ್ಹ ಶಾಸಕರ ಕ್ಷೇತ್ರಗಳಿಗೆ ಹಣದ ಹೊಳೆ ಹರಿಸಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. 17 ಅನರ್ಹ ಶಾಸಕರಿಗೆ ಈ ಹಿಂದೆ ಹೆಚ್ಚುವರಿ ಅನುದಾನ ನೀಡಲಾಗಿತ್ತು. ಅದನ್ನು ಪರಿಷ್ಕರಿಸಿ ಕಡಿಮೆ ಮಾಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

’ರಾಜ್ಯದ 224 ಕ್ಷೇತ್ರಗಳನ್ನೂ ಸಮಾನವಾಗಿ ಕಾಣಲಾಗುತ್ತಿದ್ದು, ಪಕ್ಷ ತಾರತಮ್ಯ ಮಾಡದೇ ಅನುದಾನ ನೀಡಲಾಗುತ್ತಿದೆ. ಹಿಂದೆಯೂ ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೂ ಸಮಾನ ಒತ್ತು ನೀಡಿದ್ದೆ. ಅದೇ ನೀತಿಯನ್ನು ಈಗಲೂ ಮುಂದುವರಿಸಿದ್ದೇನೆ’ ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಹಿರಿಯ ಸಚಿವರಾದ ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌, ಜೆ.ಸಿ.ಮಾಧುಸ್ವಾಮಿ, ಬಸವರಾಜಬೊಮ್ಮಾಯಿ, ಸಿ.ಸಿ.ಪಾಟೀಲ, ಪ್ರಭು ಚವ್ಹಾಣ್ ಇದ್ದರು. ಇನ್ನಿಬ್ಬರು ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಮತ್ತು ಲಕ್ಷ್ಮಣಸವದಿ ಕಾರ್ಯಕ್ರಮಕ್ಕೆ ಗೈರಾಗಿದ್ದರು.

‘ದಿನ ನೂರು, ಮಾತು ಜೋರು, ಸಾಧನೆ ಶೂನ್ಯ’
ದಿನ ನೂರು, ಮಾತು ಜೋರು, ಸಾಧನೆ ಶೂನ್ಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ 100 ದಿನಗಳ ತುಂಬಿರುವ ಹಿನ್ನೆಲೆಯಲ್ಲಿ ‍ಪ್ರತಿಕ್ರಿಯೆ ನೀಡಿರುವ ಅವರು, ‘ಕ್ರಿಕೆಟ್ ಮೈದಾನದಲ್ಲಿ ಅಂಪೈರ್ ಔಟ್ ಎಂದು ಮತ್ತೆ ಮತ್ತೆ ತೀರ್ಪು ನೀಡಿದರೂ ಒಪ್ಪಿಕೊಳ್ಳದ ಬ್ಯಾಟ್ಸ್ ಮ್ಯಾನ್ ಶತಕ ಪೂರೈಸಿದ ರೀತಿಯಲ್ಲಿ ಯಡಿಯೂರಪ್ಪ 100 ದಿನಗಳ ಆಡಳಿತ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.

ನೆರೆ ಹಾವಳಿಯಿಂದ ಜನ ತತ್ತರಿಸುತ್ತಿರುವಾಗ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಹ ಅನಾಥ ಸ್ಥಿತಿ ನೆಲೆಸಿತ್ತು. ಜನತೆ ನೆರೆ ನೀರಲ್ಲಿ ಮುಳುಗುತ್ತಿದ್ದರೆ ಮುಖ್ಯಮಂತ್ರಿಯವರು ಆಪರೇಷನ್ ಕಮಲದಲ್ಲಿ ಮುಳುಗಿದ್ದರು. ಸಚಿವರಂತೂ ಇರಲೇ ಇಲ್ಲ, ಬಿಜೆಪಿಯ ಶಾಸಕರು ಮತ್ತು ಸಂಸದರೂ ಕೂಡಾ ನೆರೆ ಸಂತ್ರಸ್ತರ ಕಡೆ ತಲೆ ಹಾಕಲಿಲ್ಲ ಎಂದು ದೂರಿದ್ದಾರೆ.

ನೆರೆ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ರಾಜ್ಯದ ಜನತೆ ಬಂಡೇಳುತ್ತಿರುವ ಸೂಚನೆ ಗೊತ್ತಾಗುತ್ತಿದ್ದಂತೆಯೇ ಪ್ರಧಾನಿಯವರು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ₹1,200 ಕೋಟಿ ಪರಿಹಾರ ನೀಡಿ ಕೈತೊಳೆದುಕೊಂಡು ಬಿಟ್ಟರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಪುಣ್ಯಾತ್ಮನ ಹೆಸರು ಪ್ರಸ್ತಾಪ ಬೇಡ’
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟೀಕೆಗಳ ಕುರಿತು ಪ್ರಶ್ನಿಸಲು ಮುಂದಾದಾಗ, ‘ಆ ಪುಣ್ಯಾತ್ಮನ ಹೆಸರು ಈಗ ಪ್ರಸ್ತಾಪ ಬೇಡ’ ಎಂದು ನಗುತ್ತಲೇ ಯಡಿಯೂರಪ್ಪ ಕೈಮುಗಿದರು.

‘ಅವರೆಲ್ಲ ದೊಡ್ಡವರು ಅವರ ಬಗ್ಗೆ ನಾವು ಮಾತನಾಡೋದು ಸರಿಯಲ್ಲ’ ಎಂದು ಅವರು ವ್ಯಂಗ್ಯವಾಡಿದರು.

ಪ್ರಮುಖ ಸಾಧನೆಗಳು
* ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ. ಬಿಜೆಪಿ ಸಂಸದರ ಪ್ರಾಮಾಣಿಕ ಪ್ರಯತ್ನವೇ ಇದಕ್ಕೆ ಕಾರಣ.
* ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಸುಧಾರಣೆಗಾಗಿ ಆದ್ಯತೆ ನೀಡಲಾಗುತ್ತಿದೆ. ಮಕ್ಕಳ ಶಾಲಾ ಬ್ಯಾಗ್‌ಗಳ ಹೊರೆ ಇಳಿಕೆ ಮತ್ತು ಮಧ್ಯಾಹ್ನ ಉಪಾಹಾರ ಯೋಜನೆಯಡಿ ಸಮತೋಲಿತ ಆಹಾರ ವಿತರಣೆ.
* ಆಯುಷ್ಮಾನ್‌ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ 1,29,305 ಫಲಾನುಭವಿಗಳ ಚಿಕಿತ್ಸೆಗೆ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ₹197.23 ಕೋಟಿ ಖರ್ಚಾಗಿದೆ.
* ಆಶಾ ಕಾರ್ಯಕರ್ತೆಯರ ಗೌರವ ಧನ ₹500 ಹೆಚ್ಚಳ ಮಾಡಲಾಗಿದೆ. ಈಗ ನೀಡುತ್ತಿರುವ ಮಾಸಿಕ ಪ್ರೋತ್ಸಾಹ ಧನ ₹3,500 ಅನ್ನು ನವೆಂಬರ್‌ 1 ರಿಂದ ಅನ್ವಯ ಆಗುವಂತೆ ₹4,000 ಕ್ಕೆ ಹೆಚ್ಚಳ ಮಾಡಲಾಗಿದೆ.
* ಕೇಂದ್ರ ಸರ್ಕಾರ ಚಿಕ್ಕಮಗಳೂರು, ಹಾವೇರಿ ಮತ್ತು ಯಾದಗಿರಿಯಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಅನುಮತಿ ನೀಡಿದೆ. ತಲಾ ₹325 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಲಿವೆ. ಚಿಕ್ಕಬಳ್ಳಾಪುರ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕೇಂದ್ರದ ಅನುಮತಿ ನಿರೀಕ್ಷಿಸಲಾಗಿದೆ.
* ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ₹60 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್‌ ಕೇಂದ್ರ ಸ್ಥಾಪನೆ.
* ವಿಶೇಷ ಅಭಿವೃದ್ಧಿ ಯೋಜನೆಯಡಿ 207 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಒಂದು ಸಾವಿರ ಅಂಗನವಾಡಿ ಕಟ್ಟಡಗಳ ದುರಸ್ತಿಗೆ ₹10 ಕೋಟಿ ಬಿಡುಗಡೆ ಮಾಡಲಾಗಿದೆ.
* ಎಲ್ಲರಿಗೂ ಸೂರು ಕಲ್ಪಿಸುವ ಆಶಯ ಸಾಕಾರಗೊಳಿಸಲು ಈ ವರ್ಷ ರಾಜ್ಯ ಸರ್ಕಾರವು 1.5 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದೆ. ಈಗಾಗಲೇ ಒಟ್ಟು 78,285 ಮನೆಗಳನ್ನು ನಿರ್ಮಿಸಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 30,887 ಮನೆಗಳನ್ನು ನಿರ್ಮಿಸಲಾಗಿದೆ.
* ‘ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಯಡಿ ಆರು ಪ್ಯಾಕೇಜ್‌ಗಳಲ್ಲಿ 28,754 ಮನೆಗಳ ನಿರ್ಮಾಣ ಕಾರ್ಯವನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಇದಕ್ಕಾಗಿ ಜಮೀನನ್ನೂ ಹಸ್ತಾಂತರಿಸಿದ್ದು, ಕಾಮಗಾರಿ ಆರಂಭಿಸಿದ್ದಾರೆ.
* ಸಿದ್ದಗಂಗಾ ಡಾ.ಶಿವಕುಮಾರಸ್ವಾಮಿ ಮತ್ತು ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರಿನಲ್ಲಿ ವಿಶ್ವ ದರ್ಜೆ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪಿಸಲು ತಲಾ ₹ 25 ಕೋಟಿಯಂತೆ ₹50 ಕೋಟಿ ಮಂಜೂರು ಮಾಡಲಾಗಿದೆ.
* ಅನ್ನಭಾಗ್ಯ ಯೋಜನೆಯ ಸೌಲಭ್ಯವನ್ನು ಅನರ್ಹರು ಪಡೆಯುವುದನ್ನು ತಡೆಯಲು ಸುಮಾರು 51 ಸಾವಿರ ಅನರ್ಹ ಬಿಪಿಎಲ್‌ ಪಡಿತರ ಚೀಟಿಗಳನ್ನು ಗುರುತಿಸಲಾಗಿದೆ.
* ಪ್ರವಾಹ ಪೀಡಿತ ಗ್ರಾಮೀಣ ಪ್ರದೇಶದ ಜನರು ವಲಸೆ ಹೋಗದಂತೆ ತಡೆಯಲು ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚುವರಿ 50 ಉದ್ಯೋಗ ದಿನಗಳನ್ನು ನೀಡುವಂತೆ ಕೋರಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.