ADVERTISEMENT

ಮೋದಿ ಅಭಿನಂದನೆಗೆ ಸರಣಿ ಕಾರ್ಯಕ್ರಮ

ಜ.18 ಕ್ಕೆ ಶಾ ಅವರಿಂದ ಹುಬ್ಬಳ್ಳಿಯಲ್ಲಿ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 19:55 IST
Last Updated 8 ಜನವರಿ 2020, 19:55 IST

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಗೆ ಪ್ರಮುಖ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಲು ರಾಜ್ಯ ಬಿಜೆಪಿ ರಾಜ್ಯದ ವಿವಿಧೆಡೆ ಸರಣಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಈ ಕಾರ್ಯಕ್ರಮಗಳ ಮೂಲಕ ರಾಜ್ಯದ ಎಲ್ಲೆಡೆ ಸಾರ್ವಜನಿಕರಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಅರಿವು ಮೂಡಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಆ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಈಗಾಗಲೇ ಆರಂಭಿಸಿರುವ ಪೌರತ್ವ ತಿದ್ದುಪಡಿ ಪರ ಆಂದೋಲನದಲ್ಲಿ ಈವರೆಗೆ 4.65 ಲಕ್ಷ ಮನೆಗಳನ್ನು ಸಂಪರ್ಕಿಸಲಾಗಿದೆ. ಇನ್ನು 30 ಲಕ್ಷ ಮನೆಗಳನ್ನು ಸಂಪರ್ಕಿಸುವ ಗುರಿ ಇದೆ ಎಂದು ಅವರು ಹೇಳಿದರು.

ADVERTISEMENT

ಇದೇ 11 ಮತ್ತು 12 ರಂದು ಎರಡು ದಿನಗಳ ಕಾಲ ಮನೆ– ಮನೆಗೆ ಸಂಪರ್ಕಕ್ಕೆ ವಿಶೇಷ ಯೋಜನೆ ಮತ್ತು ವಿಸ್ತಾರಕ ಯೋಜನೆ ರೂಪಿಸಲಾಗಿದೆ. ಅಂದು ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಬಿಜೆಪಿ ಸದಸ್ಯರು ಕಾರ್ಯಕರ್ತರ ಜತೆ ಸೇರಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ರಾಜ್ಯದ ಎಲ್ಲ 58 ಸಾವಿರ ಬೂತ್‌ಗಳಲ್ಲಿ ಸಿಎಎ ಕುರಿತು ಜನರಿಗೆ ಅರಿವು ಮೂಡಿಸಲಾಗುವುದು ಎಂದು ಟೆಂಗಿನಕಾಯಿ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಸತ್‌ ಒಪ್ಪಿಗೆ ನೀಡಿರುವುದು ಕಾಂಗ್ರೆಸ್‌, ಕಮ್ಯುನಿಸ್ಟ್‌ ಪಕ್ಷಗಳು ಮತ್ತು ಬುದ್ಧಿಜೀವಿಗಳಿಗೆ ಸಹಿಸಲು ಆಗದೇ ಷಡ್ಯಂತ್ರ ನಡೆಸಿದ್ದಾರೆ. ವಿಶೇಷವಾಗಿ ಮುಸ್ಲಿಮರಲ್ಲಿ ತಪ್ಪು ಭಾವನೆ ಮೂಡಿಸಿ, ಗಲಭೆ ನಡೆಸುವಂತೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ದೂರಿದರು.

ಅಭಿನಂದನಾ ಕಾರ್ಯಕ್ರಮ: ಜನವರಿ 9 ರಂದು ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌–ಸಿಂಧನೂರು, ಮಸ್ಕಿ, ಜ.11 ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ–ಕಲಬುರ್ಗಿ, ಯಾದಗಿರಿ, ಕೇಂದ್ರ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌– ಬೆಳಗಾವಿ, ಚಿಕ್ಕೋಡಿ, ಜ.12 ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ– ರಾಯಚೂರು, ಜ.13 ಉಪಮುಖ್ಯಮಂತ್ರಿ ಲಕ್ಷಣ ಸವದಿ– ದಾವಣಗೆರೆ ಮತ್ತು ಹಾವೇರಿಯಲ್ಲಿ ರ್‍ಯಾಲಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.