ADVERTISEMENT

ಕೆ‍ಪಿಎಸ್‌ಸಿ: ಆಯ್ಕೆಪಟ್ಟಿ ಊರ್ಜಿತಕ್ಕೆ ಮಸೂದೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 19:30 IST
Last Updated 9 ಫೆಬ್ರುವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2011ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವುದಕ್ಕೆ ಪೂರಕವಾಗಿ ರೂಪಿಸಿರುವ ‘ಕರ್ನಾಟಕ ನಾಗರಿಕ ಸೇವೆಗಳು (ಆಯ್ಕೆಯ ಊರ್ಜಿತಗೊಳಿಸುವಿಕೆ ಮತ್ತು 2011ರ ಗೆಜೆಟೆಡ್‌ ಪ್ರೊಬೇಷನರಿಗಳ ನೇಮಕಾತಿ) ಮಸೂದೆ–2022’ಕ್ಕೆ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಮಸೂದೆಯನ್ನು ಇದೇ 14ರಿಂದ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದರು.

2011ರ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆಪಟ್ಟಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಆಗಿರುವ ಲೋಪಗಳನ್ನು ಆಧರಿಸಿ, ಅಭ್ಯರ್ಥಿಗಳಿಗೆ ರಕ್ಷಣೆ ನೀಡಲು ಸರ್ಕಾರ ನಿರ್ಧರಿಸಿದೆ. 2011ರಲ್ಲಿ ಕೆಪಿಎಸ್‌ಸಿ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವುದಕ್ಕೆ ಸೀಮಿತವಾಗಿ ಮಸೂದೆ ರೂಪಿಸಲಾಗಿದೆ. ನೇಮಕಾತಿಯಾದವರಿಗೆ ಸೇವಾ ಜ್ಯೇಷ್ಠತೆ ನೀಡುವುದು ಸೇರಿದಂತೆ ಇತರ ವಿಷಯಗಳನ್ನು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗುವುದು ಎಂದು ಹೇಳಿದರು.

ADVERTISEMENT

‘ಆಯ್ಕೆಪಟ್ಟಿಯನ್ನು ಹೈಕೋರ್ಟ್‌ ರದ್ದುಪಡಿಸಿದ್ದು, ಸುಪ್ರೀಂಕೋರ್ಟ್‌ ಕೂಡ ಈ ತೀರ್ಪನ್ನು ಮಾನ್ಯ ಮಾಡಿರುವಾಗ ನೇಮಕಾತಿ ಆದೇಶ ನೀಡುವುದು ಸರಿಯೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನ್ಯಾಯಾಲಯ ಎತ್ತಿರುವ ಆಕ್ಷೇಪಗಳಿಗೆ ನೀಡುವ ಸಮಜಾಯಿಷಿಗಳನ್ನೂ ಮಸೂದೆಯಲ್ಲೇ ಅಡಕಗೊಳಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.