ADVERTISEMENT

ಸಂಪುಟ ಪುನರ್‌ ರಚನೆ: ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದ ಬೊಮ್ಮಾಯಿ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ  ಭೇಟಿಯ ಬಳಿಕ ಮಾತನಾಡಿದ ಸಿಎಂ

​ಪ್ರಜಾವಾಣಿ ವಾರ್ತೆ
Published 11 ಮೇ 2022, 11:28 IST
Last Updated 11 ಮೇ 2022, 11:28 IST
ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾದ ಸಿಎಂ ಬೊಮ್ಮಾಯಿ.
ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾದ ಸಿಎಂ ಬೊಮ್ಮಾಯಿ.   

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ ರಚನೆಗೆ ಸಂಬಂಧಿಸಿದಂತೆ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬುಧವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಮುಂದಿನ ಕೆಲವು ದಿನಗಳ ಬೆಳವಣಿಗೆಯ ಆಧಾರದಲ್ಲಿ ಪಕ್ಷದ ವರಿಷ್ಠರು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಯೂ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ರಾಜ್ಯದ ರಾಜಕೀಯ ಸ್ಥಿತಿ ಮತ್ತು ಸಂಪುಟ ವಿಸ್ತರಣೆಯ ಸಂಬಂಧ ಒಂದು ನಿರ್ಣಯ ತೆಗೆದುಕೊಳ್ಳುವ ವಿಚಾರವನ್ನೂ ಅವರ ಗಮನಕ್ಕೆ ತಂದಿದ್ದೇನೆ ಎಂದು ಬೊಮ್ಮಾಯಿ ಹೇಳಿದರು.

ADVERTISEMENT

ಶಾ ಅವರಿಗೆ ಸಂಪುಟ ವಿಸ್ತರಣೆ ವಿಚಾರವಾಗಿ ಮಾಹಿತಿಯನ್ನು ಕೊಟ್ಟಿದ್ದೇನೆ. ನಡ್ಡಾ ಅವರ ಜತೆ ಮಾತನಾಡಿ ಇನ್ನು ಎರಡು– ಮೂರು ದಿನಗಳಲ್ಲಿ ತೀರ್ಮಾನ ಹೇಳುವುದಾಗಿ ತಿಳಿಸಿದರು. ಶಾ ಅವರಿಗೆ ಯಾವುದೇ ಹೆಸರುಗಳನ್ನು ಹೇಳಿಲ್ಲ. ಮುಂದಿನ ಒಂದು ವಾರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಒಂದಷ್ಟು ಬೆಳವಣಿಗೆಗಳು ಆಗಬಹುದು. ರಾಜಕೀಯ ಸ್ಥಿತಿಗತಿಗೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪರಿಣಾಮಗಳ ಬಗ್ಗೆಯೂ ಚರ್ಚಿಸಲಾಯಿತು. ಮುಂದೆ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು. ಮುಂಬರುವ ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗಳ ಬಗ್ಗೆಯೂ ಚರ್ಚಿಸಲಾಯಿತು. ನನ್ನ ಕಡೆಯಿಂದ ಎಲ್ಲ ವಿವರಗಳನ್ನು ಅವರಿಗೆ ನೀಡಿದ್ದೇನೆ. ಅಂತಿಮವಾಗಿ ಅವರೇ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಉತ್ತರಾಖಂಡ್‌ ಅಥವಾ ಗುಜರಾತ್‌ ಮಾದರಿ ಬದಲಾವಣೆಗಳು ಕರ್ನಾಟಕಕ್ಕೆ ಅನ್ವಯ ಆಗುವುದಿಲ್ಲ. ಆಯಾಯ ರಾಜ್ಯಗಳ ಸ್ಥಿತಿಗತಿಗೆ ಅನುಗುಣವಾಗಿ ನಿರ್ಧಾರ ಆಗಲಿವೆ. ಅದೇ ರೀತಿ ನಮ್ಮ ರಾಜ್ಯದ ಸ್ಥಿತಿಗತಿ, ಆಡಳಿತಾತ್ಮಕ ಸ್ಥಿತಿಗತಿ, ರಾಜಕೀಯ ವಿದ್ಯಮಾನಗಳಿಗೆ ತಕ್ಕಂತೆ ಸಂಪುಟದ ವಿಚಾರವೂ ತೀರ್ಮಾನ ಆಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.