ADVERTISEMENT

ಜಾತಿಗಣತಿ ಬಗ್ಗೆ ಮೊದಲು ಆಕ್ಷೇಪಿಸಿದ್ದೇ ಕಾಂಗ್ರೆಸ್: ಸಿದ್ದರಾಮಯ್ಯಗೆ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2021, 9:52 IST
Last Updated 28 ಆಗಸ್ಟ್ 2021, 9:52 IST
ಸಿದ್ದರಾಮಯ್ಯ (ಪ್ರಜಾವಾಣಿ ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಪ್ರಜಾವಾಣಿ ಸಂಗ್ರಹ ಚಿತ್ರ)   

ಬೆಂಗಳೂರು: ಜಾತಿಗಣತಿ ಮತ್ತು ಒಬಿಸಿ ಕಾಯ್ದೆ ತಿದ್ದುಪಡಿ ಕುರಿತು ಬಿಜೆಪಿಯ ನಾಯಕರ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿರುವ ಟೀಕೆಗಳಿಗೆ ಬಿಜೆಪಿಯ ಕರ್ನಾಟಕ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.

‘ನಿಮ್ಮ (ಸಿದ್ದರಾಮಯ್ಯ) ಸರ್ಕಾರ ನಡೆಸಿದ್ದ ಜಾತಿಗಣತಿ ಬಗ್ಗೆ ಮೊದಲು ಆಕ್ಷೇಪ ವ್ಯಕ್ತಪಡಿಸಿದ್ದೇ ಕಾಂಗ್ರೆಸ್ಸಿಗರು’ ಎಂದು ಆರೋಪಿಸಿದೆ. ಸರಣಿ ಟ್ವೀಟ್‌ ಮೂಲಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದೆ.

‘ಕೇಂದ್ರ ಸರ್ಕಾರ ಒಬಿಸಿ ಕಾಯ್ದೆಗೆ ಸಂವಿಧಾನಿಕ ತಿದ್ದುಪಡಿ ತಂದಿದ್ದು ತರಾತುರಿಯಲ್ಲಲ್ಲ. ಹಿಂದುಳಿದ ವರ್ಗದ ಸರ್ವತೋಮುಖ ಏಳಿಗೆಗಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ತಿದ್ದುಪಡಿ ಮಸೂದೆ ಮಂಡನೆಯಾದಾಗ, ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್ಸಿಗರೂ ಕಲಾಪದಲ್ಲಿ ಭಾಗವಹಿಸಿದ್ದು ನೆನಪಿದೆಯೇ ಸಿದ್ದರಾಮಯ್ಯನವರೇ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಸಿದ್ದರಾಮಯ್ಯ ಅವರೇ, ನಿಮ್ಮ ಸರ್ಕಾರ ನಡೆಸಿದ್ದ ಜಾತಿ ಗಣತಿ ಬಗ್ಗೆ ಮೊದಲು ಆಕ್ಷೇಪ ವ್ಯಕ್ತಪಡಿಸಿದ್ದೆ ಕಾಂಗ್ರೆಸ್ಸಿಗರು. ವರದಿ ಸಲ್ಲಿಕೆಯಾಗುವುದಕ್ಕೆ ಮುನ್ನವೇ ಆಯ್ದ ಭಾಗ ಸೋರಿಕೆಯಾದರೆ ಆ ವರದಿಯ ಪಾವಿತ್ರ್ಯತೆ ಬಗ್ಗೆ ಯಾವ ಭಾವನೆ ಬರಲು ಸಾಧ್ಯ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಪ್ರಶ್ನಿಸಿದೆ.

‘ಜಾತಿ ಗಣತಿ ವರದಿಯ ಆಯ್ದ ಭಾಗಗಳು 2017ರಲ್ಲಿ ಸೋರಿಕೆಯಾಗುವುದರ ಹಿಂದೆ ನಿಮ್ಮ ಪ್ರಗತಿಪರ ಪಟಾಲಂನ ಕೈವಾಡ ಇತ್ತಲ್ಲವೇ ಸಿದ್ದರಾಮಯ್ಯ ಅವರೇ? ಚುನಾವಣೆಯ ದೃಷ್ಟಿಯಿಂದ ಜಾತಿ ಸಮೀಕರಣ ಮಾಡುವುದಕ್ಕಾಗಿಯೇ ನೀವು ಈ ಅಸಹ್ಯದ ಕೆಲಸ ಮಾಡಿಸಿದ್ದನ್ನು ಒಪ್ಪಿಕೊಳ್ಳುವಿರಾ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಜಾತಿ ಗಣತಿ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರು ಬರೆದ ಲೇಖನ ಇಂದಿನ (ಶನಿವಾರದ) ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ಅದರಲ್ಲಿ ಜಾತಿ ಗಣತಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದ ಸಿದ್ದರಾಮಯ್ಯನವರು ಬಿಜೆಪಿ ನಾಯಕರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದರು.

‘ಬಿಜೆಪಿಯ ಕೆಲ ನಾಯಕರು ಜಾತಿ ಸಮೀಕ್ಷೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಬಹಳಷ್ಟು ತರಾತುರಿಯಿಂದ ಸಂವಿಧಾನಕ್ಕೆ ತಿದ್ದುಪಡಿಯನ್ನೂ ಮಾಡಿ ಆರ್ಥಿಕವಾಗಿ ಹಿಂದುಳಿದವರಿಗೂ ಶೇಕಡಾ 10ರಷ್ಟು ಮೀಸಲಾತಿಯನ್ನು ಘೋಷಿಸಿತು. ಈ ಮೀಸಲಾತಿ ನೀತಿಗೆ ಮುನ್ನ ಯಾವ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆದಿದೆ? ರಾಜ್ಯ ಸರ್ಕಾರ ಇಂತಹ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಬಾರದು. ಈಗಾಗಲೇ ಜಾತಿಗಣತಿಯ ವರದಿ ಮುಖ್ಯಮಂತ್ರಿಯವರ ಮೇಜಿನಲ್ಲಿದೆ. ಮೊದಲು ಅದನ್ನು ಸ್ವೀಕರಿಸಬೇಕು, ಅದರಲ್ಲಿ ಏನಾದರೂ ಲೋಪ-ದೋಷಗಳಿದ್ದರೆ ಅದನ್ನು ಸರಿಪಡಿಸಲು ಕ್ರಮಕೈಗೊಳ್ಳಬೇಕು. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಸರ್ಕಾರಕ್ಕೆ ಸಂಪೂರ್ಣವಾಗಿ ಸಹಕರಿಸಲು ನಾವು ಸಿದ್ದರಿದ್ದೇವೆ’ ಎಂದು ಲೇಖನದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದರು.

ಲೇಖನದ ಪೂರ್ಣ ಪಾಠ ಓದಲು ಲಿಂಕ್ ಕ್ಲಿಕ್ ಮಾಡಿ:ಜಾತಿ ವಿನಾಶದ ಮೊದಲ ಹೆಜ್ಜೆ ಜಾತಿಗಣತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.