ADVERTISEMENT

ಜಾತಿ ಗಣತಿ ವರದಿ ಬಹಿರಂಗಕ್ಕೆ ‘ಕೈ’ ಸದಸ್ಯರಿಂದಲೇ ಪಟ್ಟು

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:38 IST
Last Updated 6 ಜುಲೈ 2018, 19:38 IST

ಬೆಂಗಳೂರು: ರಾಜ್ಯ ಸರ್ಕಾರವು ಕೂಡಲೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ (ಜಾತಿಗಣತಿ) ವರದಿ ಬಹಿರಂಗ ಮಾಡಬೇಕು ಎಂದು ಕಾಂಗ್ರೆಸ್‌ ಸದಸ್ಯರೇ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಪಟ್ಟು ಹಿಡಿದರು.

‘₹176 ಕೋಟಿ ಖರ್ಚು ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ. ಆದರೆ, ವರದಿ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ. ಒಬಿಸಿಯಲ್ಲಿ 102 ಜಾತಿಗಳಿದ್ದು, ಶೇ 15 ಮೀಸಲಾತಿ ಹಂಚಿಕೆಯಾಗಿದೆ. ಕೆಲವೇ ಜಾತಿಗಳು ಇದರ ಲಾಭ ಪಡೆಯುತ್ತಿವೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಬಗ್ಗಿ, ಬಾಂದಿ, ಗುಳ್ಳಿಯಂತಹ ಜಾತಿಗಳ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಜಾತಿಗಳು ಸೌಲಭ್ಯಗಳಿಂದ ವಂಚಿತವಾಗಿವೆ. ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಲು ವರದಿ ಬಹಿರಂಗ ಮಾಡಬೇಕು’ ಎಂದು ಬಿಜೆಪಿಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಗಮನ ಸೆಳೆದರು.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಉತ್ತರಿಸಿ, ‘ಜಾತಿ ಸಮೀಕ್ಷೆಯ ವಿಶ್ಲೇಷಣೆ ಕಾರ್ಯ ಪ್ರಗತಿಯಲ್ಲಿದ್ದು, ವರದಿ ತಯಾರಿಕೆ ಕಾರ್ಯ ಅಂತಿಮ ಹಂತದಲ್ಲಿದೆ. ಆಯೋಗದಿಂದ ವರದಿ ಸ್ವೀಕೃತವಾದ ನಂತರ ವರದಿಯನ್ನು ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸಲಾಗುವುದು’ ಎಂದರು.

ADVERTISEMENT

ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯ, ‘ರಾಜ್ಯದಲ್ಲಿ 13,150 ಜಾತಿಗಳಿವೆ ಎಂಬ ಅಂಶ ಈ ವರದಿಯಲ್ಲಿದೆ. ಈ ವರದಿ ಸಿದ್ಧವಾಗಿದ್ದು, ಕೆಲವು ಸಂಘಟನೆಗಳ ಒತ್ತಡದಿಂದ ವರದಿಯನ್ನು ತಡೆ ಹಿಡಿಯಲಾಗಿದೆ. ಇದರಿಂದ ಸರ್ಕಾರಕ್ಕೆ ಮುಜುಗರವಾಗಿದೆ’ ಎಂದರು.

ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ, ‘ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂಬ ಮಾಹಿತಿ ಇದೆ. ಆದರೆ, ಯಾಕೆ ಹೊರಗಡೆ ಬರುತ್ತಿಲ್ಲ. ಸಚಿವರು ಸದನದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಆಕ್ಷೇಪಿಸಿದರು. ಕಾಂಗ್ರೆಸ್‌ನ ಎಚ್‌.ಎಂ. ರೇವಣ್ಣ ಧ್ವನಿಗೂಡಿಸಿದರು.

‘ಆದಷ್ಟು ಬೇಗ ವರದಿ ಬಿಡುಗಡೆ ಮಾಡುತ್ತೇವೆ. ಯಾವ ದಿನ ಬಿಡುಗಡೆ ಮಾಡುತ್ತೇವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ಪುಟ್ಟರಂಗಶೆಟ್ಟಿ ಉತ್ತರಿಸಿದರು.

‘ಇದೇ 12ರೊಳಗೆ ವರದಿ ಬಿಡುಗಡೆ ಮಾಡದಿದ್ದರೆ ಸದನದಲ್ಲಿ ಧರಣಿ ನಡೆಸುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.

ಕಾಂಗ್ರೆಸ್‌ನ ಪಿ.ಆರ್‌.ರಮೇಶ್‌, ‘ಸಿ.ಎಸ್‌. ದ್ವಾರಕನಾಥ್‌ ಸಮಿತಿಯನ್ನು ಕಾಂಗ್ರೆಸ್‌–ಜೆಡಿಎಸ್‌ ಸರ್ಕಾರ 2005ರಲ್ಲಿ ರಚಿಸಿತ್ತು. ಕಾಂಗ್ರೆಸ್‌ ಸರ್ಕಾರ ಮುತುವರ್ಜಿ ವಹಿಸಿ ಈ ಕೆಲಸ ಮಾಡುತ್ತಿದೆ’ ಎಂದರು.

‘ಈ ವಿಷಯದಲ್ಲಿ ರಾಜಕಾರಣ ಮಾಡಬೇಡಿ’ ಎಂದು ಎಚ್‌.ಎಂ. ರೇವಣ್ಣ ಎಚ್ಚರಿಸಿದರು. ‘ವರದಿ ವಿಳಂಬಕ್ಕೆ ಬಿಜೆಪಿಯೇ ಕಾರಣ’ ಎಂದು ರಮೇಶ್‌ ಆರೋಪಿಸಿದರು. ‘ಆಯೋಗದ ಅಧ್ಯಕ್ಷರ ಜತೆಗೆ ಇನ್ನೊಂದು ಸುತ್ತಿನ ಸಭೆ ನಡೆಸುತ್ತೇವೆ. ಬಳಿಕ ವರದಿ ಬಿಡುಗಡೆ ಮಾಡುತ್ತೇವೆ’ ಎಂದು ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.