ADVERTISEMENT

ಗೋಹತ್ಯೆ ನಿಷೇಧ ಕಾಯ್ದೆ ಬೊಕ್ಕಸಕ್ಕೆ ಹೊರೆ!

ಭರತ್ ಜೋಶಿ
Published 2 ಮಾರ್ಚ್ 2022, 23:00 IST
Last Updated 2 ಮಾರ್ಚ್ 2022, 23:00 IST
   

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವುದನ್ನು ಪುನರ್‌ ಪರಿಶೀಲನೆ ನಡೆಸುವಂತೆ ಹಣಕಾಸು ಇಲಾಖೆಯ ಎಚ್ಚರಿಕೆಯನ್ನು ಲೆಕ್ಕಿಸದೇ, ಸರ್ಕಾರ ಅದನ್ನು ಜಾರಿ ಮಾಡಿರುವುದರಿಂದ ಬೊಕ್ಕಸಕ್ಕೆ ಭಾರಿ ಹೊರೆಯಾಗಲಿದೆ.

ಈ ಕಾಯ್ದೆ ಜಾರಿಗೆ ಬಂದ ನಂತರ ವಯಸ್ಸಾದ ಮತ್ತುಬೀದಿಗೆ ಬಿಟ್ಟಿರುವ ಹಸುಗಳಿಗಾಗಿ ಪ್ರತಿಯೊಂದು ಜಿಲ್ಲೆಯಲ್ಲೂ ಗೋಶಾಲೆ ಆರಂಭಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿತ್ತು.

ಈ ಕಾನೂನು ಜಾರಿ ಮಾಡುವ ಬಗ್ಗೆ ಪುನರ್‌ಪರಿಶೀಲನೆ ನಡೆಸುವಂತೆ 2020ರ ಡಿಸೆಂಬರ್‌ನಲ್ಲಿ ಹಣಕಾಸು ಇಲಾಖೆ ಸರ್ಕಾರವನ್ನು ಕೇಳಿಕೊಂಡಿತ್ತು. ‘ನಮ್ಮ ಪ್ರಮುಖ ಅವಶ್ಯಕತೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೇ ಇರುವಾಗ ಈ ರೀತಿ ವೆಚ್ಚ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಮುಂದಿನ ಎರಡು ವರ್ಷಗಳ ಬಜೆಟ್‌ ಗಾತ್ರವೂ ಕುಗ್ಗಲಿದೆ. ಆದ್ದರಿಂದ ಸಂಪುಟದ ನಿರ್ಣಯವನ್ನು ತಡೆ ಹಿಡಿಯುವುದು ಸೂಕ್ತ’ ಎಂದು ಸಚಿವ ಸಂಪುಟ ಸಭೆಯ ಟಿಪ್ಪಣಿಯಲ್ಲಿ ಸೂಚಿಸಿತ್ತು. ಇದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಿದೆ.

ADVERTISEMENT

ಆದರೆ, ಇದನ್ನು ಒಪ್ಪದ ಸರ್ಕಾರ ಕಾಯ್ದೆ ಜಾರಿಗೆ ತರಲು ಮುಂದಾಯಿತು. ಇದರಿಂದ ಮುಂದಿನ ನಾಲ್ಕು ವರ್ಷ ಗಳಿಗೆ ಒಟ್ಟು ₹5,240.18 ಕೋಟಿ ಬೇಕಾಗುತ್ತದೆ ಎಂದು ಹಣಕಾಸು ಇಲಾಖೆ ಹೇಳಿದೆ.

ಪ್ರತಿಯೊಂದು ಜಾನುವಾರು ನಿರ್ವಹಣೆಗೆ ದಿನಕ್ಕೆ ₹70 ಬೇಕಾಗುತ್ತದೆ. ರಾಜ್ಯದಲ್ಲಿ 2,417 ಗೋಶಾಲೆಗಳ ಅಗತ್ಯವಿದ್ದು, ಪ್ರತಿ 200 ಹಸುಗಳನ್ನು ಒಳಗೊಂಡ ಒಂದು ಗೋಶಾಲೆ ಸ್ಥಾಪನೆಗೆ ₹50 ಲಕ್ಷ ಬೇಕಾಗುತ್ತದೆ.

ಗೋಶಾಲೆ ಸ್ಥಾಪನೆಗೆ ಪ್ರತಿ ಜಿಲ್ಲೆಗೆ ₹30 ಲಕ್ಷದಿಂದ ₹53.50 ಲಕ್ಷದಷ್ಟು ಹಣ ಬಿಡುಗಡೆ ಮಾಡಿದೆ. ಅಲ್ಲದೆ, ಮೂಲಸೌಕರ್ಯ ಸೃಷ್ಟಿಗೆ ಒಟ್ಟು ₹1,208.50 ಕೋಟಿ ಬೇಕಾಗುತ್ತದೆ. ಇದರಿಂದ 27,250 ಕೋಟಿ ಮೌಲ್ಯದ ಗೋ ಮಾಂಸ ಉತ್ಪಾದನೆಗೆ ಕಡಿವಾಣ ಬೀಳಲಿದೆ. ಆದರೆ, ಗೋಮಾಂಸ ಮಾರುವವರಿಗೆ ಪರಿಹಾರವಾಗಿ ₹519.36 ಕೋಟಿ ನೀಡುವ ಜವಾಬ್ದಾರಿಯೂ ಸರ್ಕಾರಕ್ಕಿದೆ. ಉತ್ತರಪ್ರದೇಶದಲ್ಲಿ ಬೀಡಾಡಿ ದನಗಳ ವಿಚಾರ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿ ಹೊರ ಹೊಮ್ಮಿದೆ.

ನಿರ್ವಹಣೆಗೆ ಬೇಕಾಗುವ ಮೊತ್ತ

ವರ್ಷ;ಜಾನುವಾರು ಸಂಖ್ಯೆ;ನಿರ್ವಹಣೆ ಮೊತ್ತ(₹ಕೋಟಿಗಳಲ್ಲಿ)‌

1;1,81,672;464.17

2;3,05,337;780.13

3;4,04,269;1,032.90

4;4,83,415;1,235.12

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.