ADVERTISEMENT

ಒಂದೇ ಉದ್ದೇಶ; ಎರಡು ಬಗೆಯ ಆದೇಶ!

ಸಿಸಿಬಿ ಇನ್‌ಸ್ಪೆಕ್ಟರ್– ಡಿವೈಎಸ್ಪಿ ಕಮಿಷನರೇಟ್ ವ್ಯಾಪ್ತಿ ಕರ್ತವ್ಯದ ಅವಧಿ ಮಿತಿ ರದ್ದು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:15 IST
Last Updated 20 ನವೆಂಬರ್ 2018, 20:15 IST

ಹುಬ್ಬಳ್ಳಿ: ಸಿಸಿಬಿ ಅಧಿಕಾರಿಗಳ ನಿರ್ದಿಷ್ಟ ಸ್ಥಳದ ಕರ್ತವ್ಯದ ಅವಧಿಯನ್ನು 5 ವರ್ಷಕ್ಕೆ ಮಿತಿಗೊಳಿಸುವ ಹಿಂದಿನ ಆದೇಶವನ್ನು ಸರ್ಕಾರ ರದ್ದುಪಡಿಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಕಾರ್ಯಕ್ಷಮತೆ ಉದ್ದೇಶದ ನೆಪದಲ್ಲಿ ಸರ್ಕಾರವೇ ಎರಡು ಭಿನ್ನ ಆದೇಶ ಹೊರಡಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

'ವರ್ಗಾವಣೆ ದಂಧೆಯ ಇನ್ನೊಂದು ಮುಖವಿದು. ಒಂದೇ ಜಾಗದಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ಅಲ್ಲಿಯೇ ಮುಂದುವರಿಸುವ, ತಮಗೆ ಬೇಕಾದವರನ್ನು ಹುಲುಸಾದ ಸ್ಥಳಕ್ಕೆ ಕರೆತರುವ ದುರುದ್ದೇಶದಿಂದಲೇ ಆದೇಶ ಬದಲಾಯಿಸಲಾಗಿದೆ’ ಎಂಬ ಆರೋಪ ಕೇಳಿ ಬಂದಿದೆ. ಪ್ರಭಾವ ಹಾಗೂ ಹಣ ಇಲ್ಲದ ಪ್ರಾಮಾಣಿಕರು ಇನ್ನು ಮುಂದೆ ಸಿಸಿಬಿಗೆ ಬರುವುದು ಅಸಾಧ್ಯವಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಾನೂನು– ಸುವ್ಯವಸ್ಥೆ, ಸಂಚಾರ ಮತ್ತು ಸಿಸಿಬಿಯಲ್ಲಿ ಐದು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಡಿವೈಎಸ್ಪಿ ಮತ್ತು ಇನ್‌ಸ್ಪೆಕ್ಟರ್‌ಗಳನ್ನು ಕಮಿಷನರೇಟ್‌ನಿಂದ ಹೊರಗೆ ವರ್ಗಾವಣೆ ಮಾಡಬೇಕು ಎಂದು 2015ರಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಇಲಾಖೆಯ ಹಿತದೃಷ್ಟಿ ಹಾಗೂ ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಿಸುವುದೇ ಇದರ ಉದ್ದೇಶ ಎಂದು ಕಾರಣ ನೀಡಲಾಗಿತ್ತು.

ADVERTISEMENT

ಆದರೆ, ಈ ಆದೇಶದಿಂದ ಈಗ ಸಿಸಿಬಿ ಡಿವೈಎಸ್ಪಿ ಮತ್ತು ಇನ್‌ಸ್ಪೆಕ್ಟರ್‌ಗಳಿಗೆ ವಿನಾಯಿತಿ ನೀಡಲಾಗಿದೆ. ಸಿಸಿಬಿ ಅಧಿಕಾರಿಗಳಿಗೆ ವಿಶೇಷ ಅನುಭವ ಹಾಗೂ ಅಪರಾಧಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದರಿಂದ ಅವರ ಅವಧಿಯನ್ನು 5 ವರ್ಷಕ್ಕೆ ಮಿತಿಗೊಳಿಸುವುದು ಸರಿಯಲ್ಲ ಎಂದು ತಿಳಿಸಲಾಗಿದೆ.

‘ಅಧಿಕಾರಿಯೊಬ್ಬ ಒಂದೇ ಕಡೆ ಹೆಚ್ಚು ವರ್ಷ ಕೆಲಸ ಮಾಡಿದರೆ ಅಪರಾಧ ತಡೆ ಮತ್ತು ಅಪರಾಧಿಗಳ ಪತ್ತೆ ಸುಲಭ ಎಂಬುದು ನಿಜವೇ ಆಗಿದ್ದರೆ, ಹೊಸ ನಿಯಮವನ್ನು ಕಾನೂನು ಮತ್ತು ಸುವ್ಯವಸ್ಥೆ ಠಾಣೆಯ ಅಧಿಕಾರಿಗಳಿಗೆ ಮೊದಲು ಅನ್ವಯಿಸಬೇಕು. ಏಕೆಂದರೆ ಸಿಸಿಬಿಗಿಂತಲೂ ಹೆಚ್ಚಿನ ಹೊಣೆ ಈ ಠಾಣೆಯ ಅಧಿಕಾರಿಗಳ ಮೇಲಿರುತ್ತದೆ. ಪೊಲೀಸ್ ಠಾಣೆಯಲ್ಲಿಯೇ ದೂರುಗಳು ದಾಖಲಾಗುತ್ತವೆ, ಕೆಲವೊಂದು ಪ್ರಕರಣಗಳ ತನಿಖೆಯನ್ನು ಮಾತ್ರ ಸಿಸಿಬಿ ಮಾಡುತ್ತದೆ’ ಎಂಬುದು ಇನ್‌ಸ್ಪೆಕ್ಟರ್ ಒಬ್ಬರ ಅಭಿಪ್ರಾಯ.

‘ಒಂದೇ ಸ್ಥಳದಲ್ಲಿ ಇದ್ದರೆ ಮಾತ್ರ ಅಪರಾಧ, ದಂಧೆ, ಮಾಫಿಯಾದ ಬಗ್ಗೆ ಆಳವಾದ ಜ್ಞಾನ ಸಿಗುತ್ತದೆ ಎಂಬ ವಾದ ಸರಿಯಲ್ಲ. ಒಳ್ಳೆಯ ಅಧಿಕಾರಿ ಹೊಸ ಸ್ಥಳಕ್ಕೆ ಹೋದ ಮೂರ್ನಾಲ್ಕು ತಿಂಗಳಿನಲ್ಲಿ ತನ್ನ ಠಾಣೆ ವ್ಯಾಪ್ತಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬಲ್ಲ. ಅಲ್ಲದೆ ಕೆಳ ಹಂತದ ಸಿಬ್ಬಂದಿ ಬದಲಾಗದ ಕಾರಣ, ಅಂತಹ ವ್ಯತ್ಯಾಸ ಆಗುವುದಿಲ್ಲ’ ಎಂಬುದು ಅವರ ಅಭಿಪ್ರಾಯ.

‘ಒಂದೇ ಸ್ಥಳದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದರೆ ಸಹಜವಾಗಿಯೇ ಅಧಿಕಾರಿ ಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗುತ್ತಾನೆ. ಆ ಊರಿನ ಅಥವಾ ಠಾಣಾ ವ್ಯಾಪ್ತಿಯ ಎಲ್ಲ ಜನರು, ದಂಧೆಕೋರರು ಪರಿಚಿತರಾಗುವುದರಿಂದ ನಿಷ್ಪಕ್ಷಪಾತವಾಗಿ ಆತ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ನಿಗಾ ವಹಿಸಿದರೆ ಏನೂ ಆಗದು

ಬೆಂಗಳೂರಿನಂತಹ ಮಹಾನಗರದಲ್ಲಿ ಕೆಲಸ ಮಾಡಲು ಸ್ಥಳದ ಮಾಹಿತಿ (ಟೋಪೊಗ್ರಫಿ) ಗೊತ್ತಿರಲೇಬೇಕು. ಇಲ್ಲವಾದರೆ, ಅಧಿಕಾರಿಯು ಕೆಳ ಹಂತದ ಸಿಬ್ಬಂದಿಯನ್ನು ಅವಲಂಬಿಸಬೇಕಾಗುತ್ತದೆ. ಆದ್ದರಿಂದ ಇನ್‌ಸ್ಪೆಕ್ಟರ್ ದರ್ಜೆಯ ಅಧಿಕಾರಿ ಒಂದೇ ಕಡೆ ಹೆಚ್ಚು ವರ್ಷ ಇದ್ದರೆ ಅನುಕೂಲ ಎನ್ನುತ್ತಾರೆ ನಿವೃತ್ತ ಎಸ್ಪಿ ಎನ್‌.ನಾಗರಾಜ್.

ಇದೇ ಸಂದರ್ಭದಲ್ಲಿ ಅಧಿಕಾರಿಯ ಮೇಲೆ ಹಿರಿಯ ಅಧಿಕಾರಿಗಳು ನಿಗಾ ವಹಿಸಬೇಕು. ಕರ್ತವ್ಯಲೋಪ ಎಸಗಿದರೆ, ಹಿತಾಸಕ್ತಿ ಸಂಘರ್ಷಕ್ಕೆ ಒಳಗಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳುತ್ತಾರೆ.

ಕಲಿಯಲು– ಕಲಿಸಲು ವರ್ಗಾವಣೆ ಅನುಕೂಲ

‘ಕಾಲ ಕಾಲಕ್ಕೆ ವರ್ಗಾವಣೆ ಮಾಡುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಪರಿಪಾಠ. ಒಬ್ಬ ಅಧಿಕಾರಿಗೆ ಭಿನ್ನ ಜವಾಬ್ದಾರಿ ವಹಿಸಿದಾಗ ಹೊಸದನ್ನು ಕಲಿಯಬಹುದು. ತನಗೆ ಗೊತ್ತಿರುವ ವಿಷಯಗಳನ್ನು ಸಿಬ್ಬಂದಿಗೂ ಕಲಿಸಬಹುದು. ಆದ್ದರಿಂದ ನಿರ್ದಿಷ್ಟ ಅವಧಿಯ ನಂತರ ವರ್ಗಾವಣೆ ಸೂಕ್ತ’ ಎನ್ನುತ್ತಾರೆ ನಿವೃತ್ತ ಎಡಿಜಿಪಿ ಕುಚ್ಚಣ್ಣ ಶ್ರೀನಿವಾಸ್.

‘ಕಾನೂನು ಸುವ್ಯವಸ್ಥೆ, ತನಿಖೆ, ತಾಂತ್ರಿಕತೆ ಹಾಗೂ ಗುಪ್ತಚರ ನಾಲ್ಕು ಪ್ರಮುಖ ವಿಷಯಗಳಾಗಿದ್ದು, ಈ ಎಲ್ಲವೂ ಅಧಿಕಾರಿಯೊಬ್ಬನಿಗೆ ತಿಳಿದಿರಬೇಕು. ಒಂದೇ ಘಟಕದಲ್ಲಿ ಕೆಲಸ ಮಾಡುವ ಅಧಿಕಾರಿಯ ಕಾರ್ಯಕ್ಷಮತೆ ಹೆಚ್ಚಿರುತ್ತದೆ ಎಂಬುದನ್ನು ಅಳೆಯಲು ಮಾನದಂಡ ಇಲ್ಲ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.