ADVERTISEMENT

ಸಂವಿಧಾನ ನಿಜಕ್ಕೂ ಅನುಷ್ಠಾನಗೊಂಡಿದೆಯೇ?:

ಪ್ರಜಾಪ್ರಭುತ್ವದ ಸವಾಲುಗಳು ವಿಚಾರ ಸಂಕಿರಣದಲ್ಲಿ ಡಿ.ಸಿ.ಎಂ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 17:39 IST
Last Updated 4 ಮಾರ್ಚ್ 2019, 17:39 IST
ವಿವಿಧ ಜಿಲ್ಲೆಗಳಿಂದ ಬಂದಿದ್ದ ಮಹಾಸಭಾದ ಮುಖಂಡರು ವಿಚಾರ ಸಂಕಿರಣದ ಆರಂಭಕ್ಕೂ ಮುನ್ನ ಬೌದ್ಧ ಧರ್ಮದ ಪ್ರಾರ್ಥನೆ ಮಾಡಿದರು– ಪ್ರಜಾವಾಣಿ ಚಿತ್ರ
ವಿವಿಧ ಜಿಲ್ಲೆಗಳಿಂದ ಬಂದಿದ್ದ ಮಹಾಸಭಾದ ಮುಖಂಡರು ವಿಚಾರ ಸಂಕಿರಣದ ಆರಂಭಕ್ಕೂ ಮುನ್ನ ಬೌದ್ಧ ಧರ್ಮದ ಪ್ರಾರ್ಥನೆ ಮಾಡಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಮ್ಮ ದೇಶದ ಸಂಸ್ಕೃತಿ ದೊಡ್ಡದು, ಇತಿಹಾಸ ಪ್ರಾಚೀನವಾದದ್ದು ಎಂದು ಹೆಮ್ಮೆಯಿಂದ ಹೇಳುತ್ತೇವೆ. ಆದರೆ, ಇಂದಿಗೂ ಎಲ್ಲರೂ ಎಲ್ಲ ದೇವಾಲಯಗಳಿಗೆ, ಹೋಟೆಲ್‌ಗಳಿಗೆ, ಕ್ಷೌರದಂಗಡಿಗಳಿಗೆ ಹೋಗುವ ವಾತಾವರಣ ನಿರ್ಮಾಣವಾಗಿಲ್ಲ’ ಎಂದುಉಪಮುಖ್ಯಮಂತ್ರಿ ಜಿ.ಪರಮೇಶ್ವರ ಬೇಸರಿಸಿದರು.

ಛಲವಾದಿ ಮಹಾಸಭಾ ಆಯೋಜಿಸಿದ್ದ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರ ಸ್ಥಿತಿಯನ್ನು ಅವಲೋಕಿಸಿದರೆ, ನಮ್ಮ ದೇಶದ ಸಂವಿಧಾನಕ್ಕೆ ನಾವು ಎಷ್ಟರ ಮಟ್ಟಿಗೆ ಗೌರವ ಕೊಟ್ಟು, ಅನುಷ್ಠಾನ ಮಾಡಿದ್ದೇವೆಂದು ಗೊತ್ತಾಗುತ್ತದೆ’ ಎಂದರು.

ADVERTISEMENT

‘ಯಾರೂ ಅರ್ಜಿ ಹಾಕಿ ನಿರ್ದಿಷ್ಟ ಜಾತಿಯಲ್ಲಿ ಹುಟ್ಟುವುದಿಲ್ಲ. ಹಾಗಾಗಿ ಯಾರು ಸಹ ಜಾತಿಯ ಕಾರಣಕ್ಕೆ ಕೀಳರಿಮೆಯನ್ನು ಬೆಳೆಸಿಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಮಹದೇವಪ್ಪ, ‘ಇಂದು ಕೋಮುವಾದ ಹೆಚ್ಚುತ್ತಿದೆ. ಸಂವಿಧಾನ, ಮೀಸಲಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ದಲಿತ ಮುಖಂಡರು ರಾಜಕೀಯ ಶಕ್ತಿಯಾಗಿ ಬೆಳೆಯದಿದ್ದರೆ, ಸಮುದಾಯ ಅಭಿವೃದ್ಧಿಯಾಗುವುದಿಲ್ಲ’ ಎಂದು ತಿಳಿಸಿದರು.

ಛಲವಾದಿ ಮಹಾಸಭಾದ ಸಂಚಾಲಕ ಎಚ್‌.ಕೆ.ಬಸವರಾಜ್‌, ‘ವಿಶ್ವೇಶ್ವರಯ್ಯ ಬಡಾವಣೆಯಲ್ಲಿನ ಸಮುದಾಯದ ಭವನ ಸೇರಿದಂತೆ ಐದು ಜಿಲ್ಲೆಗಳಲ್ಲಿನ ಭವನ ನಿರ್ಮಾಣ ಕಾಮಗಾರಿಗಳು ನಿಂತಿವೆ. ಅವುಗಳನ್ನು ಬೇಗ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಈ ಭವನಗಳನ್ನು ಮದುವೆ ಸಮಾರಂಭಕ್ಕೆ ಮಾತ್ರವಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಇಲ್ಲಿ ಅಧ್ಯಯನ ಕೇಂದ್ರಗಳನ್ನು ರೂಪಿಸಲಾಗುವುದು’ ಎಂದು ಪರಮೇಶ್ವರ ಭರವಸೆ ನೀಡಿದರು.

***

ಪರಿಶಿಷ್ಟ ಸಮುದಾಯದ ನೌಕರರಿಗೆ ಬಡ್ತಿ ಮೀಸಲಾತಿ ಕೊಡಬೇಕೆಂದು ನಾವು ತೀರ್ಮಾನಿಸಿದೆವು. ಅನುಷ್ಠಾನಕ್ಕೆ ಈಗ ಮತ್ತೆ ತಡೆ ತಂದಿದ್ದಾರೆ. ಇದರಿಂದ ಅವರ ಮನಸ್ಥಿತಿ ಗೊತ್ತಾಗುತ್ತಿದೆ.

-ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ಸಂವಿಧಾನವೆಂದರೆ ಮೀಸಲಾತಿಯಂದು ಬಹುತೇಕರು ಅರ್ಥ ಮಾಡಿಕೊಂಡಿದ್ದಾರೆ. ಅದರ ಆಶಯಗಳು ಎಲ್ಲರಿಗೂ ಅರ್ಥವಾದಾಗ ಮಾತ್ರ ಸಮಾನತೆ ಬರುತ್ತದೆ.

-ಸಿ.ಎಸ್‌.ದ್ವಾರಕನಾಥ್, ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.