ADVERTISEMENT

ಪ್ರಸಾದ ಸೇವಿಸಿ 11 ಮಂದಿ ಸಾವು, 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಇಬ್ಬರ ಬಂಧನ

ದೇವಾಲಯದ ಶಂಕುಸ್ಥಾಪನೆಯಲ್ಲಿ ಅವಘಡ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 16:15 IST
Last Updated 14 ಡಿಸೆಂಬರ್ 2018, 16:15 IST
   

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿಗ್ರಾಮದ ಕಿಚ್‌ಕುತ್ ಮಾರಮ್ಮ ದೇವಾಲಯದ ಗೋಪುರ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶುಕ್ರವಾರ ನೀಡಲಾದ ಪ್ರಸಾದ (ತರಕಾರಿ ಬಾತ್‌) ಸೇವಿಸಿ 11 ಮಂದಿ ಮೃತಪಟ್ಟಿದ್ದಾರೆ. 75 ಮಂದಿ ಅಸ್ವಸ್ಥರಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಪ್ರಸಾದದಲ್ಲಿ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಪ್ರಸಾದ ತಿಂದಿರುವ 20ಕ್ಕೂ ಹೆಚ್ಚು ಕಾಗೆಗಳು ಹಾಗೂ 2 ನಾಯಿಗಳೂ ಮೃತಪಟ್ಟಿವೆ. ಜನರ ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.

‘ಊಟದಲ್ಲಿ ವಿಷ ಬರೆಸಿರುವ ಬಗ್ಗೆ ಅನುಮಾನಗಳಿವೆ. ತನಿಖಾ ತಂಡ ರಚಿಸಲಾಗುವುದು. ಪ್ರಸಾದವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತನಿಖೆಯ ನಂತರವೇ ಸತ್ಯಾಂಶ ತಿಳಿಯಲಿದೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದ್ದಾರೆ.

ADVERTISEMENT

ಮೃತರನ್ನು ಗೋಪಿಯಮ್ಮ (35), ಶಾಂತ (20), ಪಾಪಣ್ಣ (50),ದೊಡ್ಡಣಿ ಗ್ರಾಮದ ಅಣ್ಣಯ್ಯಪ್ಪ (45), ಅನಿತಾ (12), ಕೃಷ್ಣನಾಯಕ(50), ತೋಮಿಯರ್ ಪಾಳ್ಯ ರಾಚಯ್ಯ(45ರಿಂದ 50 ವರ್ಷ)ಎಂದು ಗುರುತಿಸಲಾಗಿದೆ. ಅಸ್ವಸ್ಥರನ್ನು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ 8 ಜನರನ್ನು ಮೈಸೂರು ಆಸ್ಪತ್ರೆಗೆ ಕಳುಹಿಸಲಾಗಿದೆ.

ಗ್ರಾಮದಲ್ಲಿ ಕಿಚ್ಚುಕುತ್ತಿ ಮಾರಮ್ಮ ದೇವಾಸ್ಥಾನದಗೋಪುರದ ಶಂಕುಸ್ಥಾಪನೆ ಏರ್ಪಡಿಸಲಾಗಿತ್ತು. ಈ ವೇಳೆಅನ್ನ ಸಂತರ್ಪಣೆ ಬಳಿಕ ಅನಾಹುತ ಸಂಭವಿಸಿದೆ.

ಘಟನೆ ಕುರಿತು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಪ್ರತಿಕ್ರಿಯಿಸಿದ್ದು, ‘ತರಕಾರಿ ಬಾತ್ ತಿಂದ‌ ನಂತರ ಈ ರೀತಿ ಆಗಿದೆ. ತಕ್ಷಣವೇ ಅದನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಜತೆಗೆ, ಪ್ರಕರಣದಬಗ್ಗೆ ವಿಸ್ತೃತ ತನಿಖೆ ನಡೆಸಲುತಂಡ ರಚಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸ್ಥಳಕ್ಕೆಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇಬ್ಬರ ಬಂಧನ

ಪ್ರಕರಣ ಸಂಬಂಧ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ ದೃಢಪಡಿಸಿದ್ದಾರೆ.

ಮುಖ್ಯಮಂತ್ರಿ ಸಂತಾಪಪ್ರಸಾದ ಸ್ವೀಕರಿಸಿ ಐವರು ಮೃತಪಟ್ಟಿರುವುದಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ಚೆನ್ನೈಗೆ ತೆರಳಿದ್ದ ಮುಖ್ಯಮಂತ್ರಿ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಕಡೆದುಕೊಂಡರು. ಘಟನೆಯ ಕುರಿತು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವಿಚಾರಣೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದರು.

ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಈ ನೋವನ್ನು ಭರಿಸುವ ಶಕ್ತಿ ಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.