ADVERTISEMENT

ಜಾನುವಾರುಗಳ ಸಮಗ್ರ ಮಾಹಿತಿಗೆ ‘ಇಯರ್‌ ಟ್ಯಾಗ್‌’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 19:54 IST
Last Updated 14 ನವೆಂಬರ್ 2018, 19:54 IST
   

ಬೆಂಗಳೂರು: ‘ರಾಜ್ಯದಾದ್ಯಂತ ಹಾಲು ನೀಡುವ ಹಸು ಹಾಗೂ ಎಮ್ಮೆಗಳ ಮಾಹಿತಿ ಕಲೆ ಹಾಕಲು ಅವುಗಳ ಕಿವಿಯಲ್ಲಿ ಓಲೆ ಮಾದರಿಯ ವೈಜ್ಞಾನಿಕ ಸಾಧನ (ಇಯರ್‌ ಟ್ಯಾಗ್‌) ಅಳವಡಿಸಲಾಗುತ್ತಿದೆ’ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದರು.

‘ಜಾನುವಾರುಗಳ ಚಲನವಲನದ ಮೇಲೆ ನಿಗಾ ಇಡಲು, ರೋಗಗಳ ಹಾಗೂ ಲಸಿಕೆ ಹಾಕಿಸಿದ ಮಾಹಿತಿ ಸಂಗ್ರಹಿಸಲೂ ಇದು ಸಹಕಾರಿ. ಈ ಸಾಧನಗಳ ಅಳವಡಿಕೆಗಾಗಿ ₹ 1.3 ಕೋಟಿ ಕಾಯ್ದಿರಿಸಲಾಗಿದೆ’ ಎಂದು ಸುದ್ದಿಗಾರರಿಗೆ ಬುಧವಾರ ಅವರು ತಿಳಿಸಿದರು.

‘ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಕಾಲುಬಾಯಿ ಜ್ವರ ನಿಯಂತ್ರಣದಲ್ಲಿದೆ. ಧಾರವಾಡ ಹಾಗೂ ಕೋಲಾರ ಸೇರಿ ಕೆಲವು ಜಿಲ್ಲೆಗಳಲ್ಲಿ ಇದು ಕಾಣಿಸಿಕೊಂಡಿದೆ. ಈ ರೋಗದಿಂದ ಯಾವುದೇ ಹಸು ಸತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಕಾಲುಬಾಯಿ ರೋಗ ಬಾರದಂತೆ ತಡೆಯುವ ಲಸಿಕೆ ಪೂರೈಸಲು ಕಂಪನಿಗಳು ಮುಂದೆಬರುತ್ತಿಲ್ಲ. ಲಸಿಕೆ ಕಾರಣದಿಂದ ಹಸು ಸತ್ತರೆ ಅದನ್ನು ಪೂರೈಸಿದ ಕಂಪನಿಯೇ ಪರಿಹಾರ ನೀಡಬೇಕು ಎಂಬ ಷರತ್ತನ್ನು ವಿಧಿಸಿದ್ದೆವು. ಈ ಷರತ್ತನ್ನು ಸಡಿಲಿಸಬೇಕು ಎಂಬುದು ಔಷಧ ಪೂರೈಕೆ ಕಂಪನಿಗಳ ಬೇಡಿಕೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದರು.

2 ಲಕ್ಷ ಟನ್‌ ಮೆಕ್ಕೆಜೋಳ ಖರೀದಿ: ‘ಪಶು ಮೇವಿಗಾಗಿ 2 ಲಕ್ಷ ಟನ್‌ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಖರೀದಿಸಲು ಸಿದ್ಧತೆ ನಡೆದಿದೆ. ಪ್ರತಿ ಟನ್‌ಗೆ ₹ 1,450ರಂತೆ ಮೇವನ್ನು ಖರೀದಿಸಲಿದ್ದೇವೆ. ಇದಕ್ಕಾಗಿ ₹ 15 ಕೋಟಿ ಮಿಸಲಿಟ್ಟಿದ್ದೇವೆ’ ಎಂದರು.

‘ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಹುಲ್ಲು ಸಾಗಣೆ ನಡೆಯುತ್ತಿತ್ತು. ಹೊರರಾಜ್ಯಗಳಿಗೆ ಭತ್ತದ ಹುಲ್ಲು ಸಾಗಣೆಗೆ ಅವಕಾಶ ನೀಡಬಾರದು ಎಂದು ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

‘ನಮ್ಮ ರಾಜ್ಯದಿಂದ ಪೂರೈಕೆ ಆಗುವ ಮೀನುಗಳಲ್ಲಿ ಫಾರ್ಮಲಿನ್‌ ಅಂಶವಿರುವ ಶಂಕೆಯಿಂದ ಗೋವಾ ಸರ್ಕಾರ ಮಾರಾಟಕ್ಕೆ ತಡೆ ಒಡ್ಡಿದೆ. ಈ ಮೀನುಗಳನ್ನು ನಾವು ಪರೀಕ್ಷೆಗೆ ಒಳಪಡಿಸಿದಾಗ ಯಾವುದರಲ್ಲೂ ಫಾರ್ಮಲಿನ್‌ ಅಂಶ ಕಂಡುಬಂದಿಲ್ಲ. ನಿರ್ಬಂಧ ತೆರವುಗೊಳಿಸುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಗೋವಾ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲಿದ್ದಾರೆ’ ಎಂದರು.

ಏನಿದು ಜಾನುವಾರು ಕಿವಿಯೋಲೆ?

ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯು ಐನಾಫ್‌ (ಇನ್ಫರ್ಮೆಷನ್‌ ನೆಟ್‌ವರ್ಕ್‌ ಫಾರ್‌ ಅನಿಮಲ್‌ ಪ್ರಾಡಕ್ಟಿವಿಟಿ ಆ್ಯಂಟ್‌ ಹೆಲ್ತ್‌) ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಆರ್‌ಎಫ್‌ಐಡಿ ತಂತ್ರಜ್ಞಾನ ಆಧಾರಿತ ಈ ಸಾಧನವನ್ನು (ಕಿವಿಯೋಲೆ ರೀತಿ ಇರುತ್ತದೆ) ಜಾನುವಾರುಗಳ ಕಿವಿಯಲ್ಲಿ ಅಳವಡಿಸಲಾಗುತ್ತದೆ. ಪ್ರತಿ ಜಾನುವಾರಿಗೂ ಪ್ರತ್ಯೇಕ ಗುರುತು ಸಂಖ್ಯೆ ನೀಡಿ, ಅದರ ತಳಿ, ವಯಸ್ಸು, ಎಷ್ಟು ಹಾಲು ನೀಡುತ್ತದೆ, ಯಜಮಾನ ಯಾರು ಎಂಬ ಮಾಹಿತಿಗಳನ್ನು ಈ ತಂತ್ರಾಂಶದಲ್ಲಿ ಅಳವಡಿಸಲಾಗುತ್ತದೆ.

‘ಜಾನುವಾರಿಗೆ ರೋಗ ಬಂದಿದ್ದರೆ ಅಥವಾ ಯಾವುದಾದರೂ ರೋಗ ನಿರೋಧಕ ಲಸಿಕೆ ಹಾಕಿಸಿದ್ದರೆ, ಈ ಕುರಿತ ಮಾಹಿತಿಯನ್ನೂ ಪಶುವೈದ್ಯರು ಈ ತಂತ್ರಾಂಶದಲ್ಲಿ ಅಳವಡಿಸುತ್ತಾರೆ. ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವುದಕ್ಕೆ ಇದು ನೆರವಾಗುತ್ತದೆ’ ಎಂದು ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಡಾ.ಡಿ. ಶಿವರಾಮ ಭಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**

ಹಾಲಿನ ದರ ಹೆಚ್ಚಿಸುವ ಪ್ರಸ್ತಾಪ ಕೆಎಂಎಫ್‌ ಮುಂದೆ ಇಲ್ಲ. ಹಾಲಿನ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸುವ ಪ್ರಯತ್ನ ನಡೆಯುತ್ತಿದೆ
-ವೆಂಕಟರಾವ್‌ ನಾಡಗೌಡ, ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ

**

ಅಂಕಿ ಅಂಶ

71 ಲಕ್ಷ - ರಾಜ್ಯದಲ್ಲಿರುವ ಹಾಲು ನೀಡುವ ಹಸು ಹಾಗೂ ಎಮ್ಮೆಗಳ ಸಂಖ್ಯೆ

46 ಲಕ್ಷ - ಜಾನುವಾರುಗಳಿಗೆ ಇಯರ್‌ ಟ್ಯಾಗ್‌ ಅಳವಡಿಕೆ ಗುರಿ ನೀಡಲಾಗಿದೆ

29 ಲಕ್ಷ - ಇಯರ್‌ ಟ್ಯಾಗ್‌ ಅಳವಡಿಸಿರುವುದು

₹ 6.20 - ಪ್ರತಿ ಇಯರ್‌ಟ್ಯಾಗ್‌ ಅಳವಡಿಕೆಗೆ ತಗಲುವ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.