ADVERTISEMENT

ಮೋದಿ, ಶಾ ಭೇಟಿಗಾಗಿ ಸಿಎಂ ಯಡಿಯೂರಪ್ಪ ದೆಹಲಿಗೆ

ಸಂಪುಟ ಪುನರ್‌ರಚನೆ ಅನುಮತಿ ಕೋರುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 20:30 IST
Last Updated 15 ಜುಲೈ 2021, 20:30 IST
ಯಡಿಯೂರಪ್ಪ
ಯಡಿಯೂರಪ್ಪ   

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್‌ರಚನೆಗೆ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ.

ಶುಕ್ರವಾರ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಅವರು ದೆಹಲಿಗೆ ತೆರಳಲಿದ್ದಾರೆ. ಸಂಜೆ 7 ಕ್ಕೆ ಪ್ರಧಾನಿ ಮೋದಿಯವರು ಸಮಯ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಇದೇ ಸಂದರ್ಭದಲ್ಲಿ ಅವರು ಮೇಕೆದಾಟು ಸಮತೋಲನ ಅಣೆಕಟ್ಟೆ ಯೋಜನೆಗೆ ಅನುಮತಿ ಸೇರಿದಂತೆ ರಾಜ್ಯದ ಹಲವು ಯೋಜನೆಗಳು ಮತ್ತು ಬೇಡಿಕೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಇದಕ್ಕಾಗಿ ಕೆಲವು ಹಿರಿಯ ಅಧಿಕಾರಿಗಳು ಗುರುವಾರ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿದರು ಎಂದು ಮೂಲಗಳು ಹೇಳಿವೆ.

ADVERTISEMENT

ಸಂಪುಟ ಪುನಾರಚನೆಗೆ ಪಟ್ಟು: ಕೇಂದ್ರ ಸಂಪುಟವನ್ನು ಸಮಗ್ರವಾಗಿ ಪುನಾರಚನೆ ಮಾಡಿದ ರೀತಿಯಲ್ಲೇ ರಾಜ್ಯದಲ್ಲೂ ಹಲವರನ್ನು ಕೈಬಿಟ್ಟು ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವ ವಿಚಾರವನ್ನು ಪ್ರಸ್ತಾಪಿಸಲಿದ್ದಾರೆ. ಬಹಿರಂಗ ಹೇಳಿಕೆಗಳ ಮೂಲಕ ತಮಗೆ ಇರಿಸು ಮುರಿಸು ಉಂಟು ಮಾಡುತ್ತಿರುವ, ಪದೇ ಪದೇ ತಮ್ಮ ವಿರುದ್ಧ ದೂರುಗಳನ್ನು ನೀಡುತ್ತಿರುವ ಸಚಿವರನ್ನು ಕೈಬಿಡಲು ಅನುಮತಿ ಕೇಳಲಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಯಡಿಯೂರಪ್ಪ ಅವರಿಗೆ ಸಂಪುಟ ಪುನಾರಚನೆಗೆ ಅವಕಾಶ ನೀಡುತ್ತಾರೋ ಇಲ್ಲವೋ ಎಂಬುದು ಖಚಿತವಿಲ್ಲ. ವರಿಷ್ಠರ ಲೆಕ್ಕಾಚಾರ ಏನಿದೆ ಎಂಬುದು ತಿಳಿದು ಬಂದಿಲ್ಲ. ಯಡಿಯೂರಪ್ಪ ಅವರ ಪ್ರಸ್ತಾಪ ಒಪ್ಪಿಗೆ ಆಗದೇ ಇದ್ದರೆ ಸ್ವಲ್ಪ ಸಮಯ ಕಾಯಬೇಕು ಎಂದು ಹೇಳಿ ಕಳಿಸುವ ಸಾಧ್ಯತೆ ಇದೆ. ವರಿಷ್ಠರ ಭೇಟಿಯ ಸಮನ್ವಯವನ್ನು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದೂ ಹೇಳಲಾಗಿದೆ.

ಪ್ರಧಾನಿ ಮೋದಿ ಶುಕ್ರವಾರ 11 ಗಂಟೆಗೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್‌ ಮೂರನೇ ಅಲೆ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಲು ವಿಡಿಯೊ ಸಂವಾದ ನಡೆಸಲಿದ್ದಾರೆ. ಅದರಲ್ಲಿ ಭಾಗವಹಿಸಿದ ಬಳಿಕ ಯಡಿಯೂರಪ್ಪ ದೆಹಲಿಗೆ ತೆರಳುವರು.

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ತಮಿಳುನಾಡಿನ ಸರ್ವಪಕ್ಷಗಳ ನಿಯೋಗವೂ ಪ್ರಧಾನಿಯವರನ್ನು ಭೇಟಿ ಮಾಡಲಿದೆ. ಈ ಮಧ್ಯೆ ಯಡಿಯೂರಪ್ಪ ಅವರ ದೆಹಲಿ ಯಾತ್ರೆ ಭೇಟಿ ಕುತೂಹಲ ಮೂಡಿದೆ. ಇತ್ತೀಚೆಗೆ ಕೇಂದ್ರ ಸಂಪುಟ ಸೇರಿರುವ ನಾಲ್ವರು ಸಚಿವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.