ADVERTISEMENT

‘ಚಿತ್ರ ನಗರಿ’ ಕಾಮಗಾರಿ ಆರಂಭಿಸಿ: ಸಿಎಂ ಸೂಚನೆ

ಮೈಸೂರಿನಲ್ಲಿ ಎರಡನೇ ಹಂತಕ್ಕೆ 50 ಎಕರೆ ಭೂಮಿ ಗುರುತಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 16:18 IST
Last Updated 18 ಸೆಪ್ಟೆಂಬರ್ 2024, 16:18 IST
<div class="paragraphs"><p>ಸಿಎಂ ಸಿದ್ದರಾಮಯ್ಯ</p></div>

ಸಿಎಂ ಸಿದ್ದರಾಮಯ್ಯ

   

ಬೆಂಗಳೂರು: ಮೈಸೂರಿನಲ್ಲಿ ಚಿತ್ರನಗರಿಯ ಮೊದಲ ಹಂತದ ಯೋಜನೆಯನ್ನು ಕೂಡಲೇ ಪ್ರಾರಂಭಿಸಬೇಕು ಹಾಗೂ ಎರಡನೇ ಹಂತಕ್ಕೆ 50 ಎಕರೆ ಭೂಮಿ ಗುರುತಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಿಸುವ ಕುರಿತು ಬುಧವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಗುರುತಿಸಿರುವ 110 ಎಕರೆ ಭೂಮಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಸ್ತಾಂತರಿಸಲು ಆದೇಶಿಸಿದರು.

ADVERTISEMENT

ಚಿತ್ರನಗರಿ ಯೋಜನೆಯನ್ನು 2015–16ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿತ್ತು. ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಭೂಮಿ ಹಸ್ತಾಂತರವಾದ ಕೂಡಲೇ ಸಾರ್ವಜನಿಕ– ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಟೆಂಡರ್‌ ಕರೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಥಿಯೇಟರ್‌, ಸ್ಟುಡಿಯೊ, ಮಲ್ಟಿಪ್ಲೆಕ್ಸ್‌, ಥೀಮ್‌ ಪಾರ್ಕ್‌, ಹೋಟೆಲ್‌ಗಳೂ ಸೇರಿದಂತೆ ಚಿತ್ರರಂಗಕ್ಕೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಒಳಗೊಂಡ ಅತ್ಯಾಧುನಿಕ ಮಾದರಿಯ ಚಿತ್ರನಗರಿ ನಿರ್ಮಿಸಬೇಕು. ಚಿತ್ರರಂಗದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಚಿತ್ರನಗರಿಯ ರೂಪುರೇಷೆಗಳನ್ನು ಅಂತಿಮಗೊಳಿಸುವಂತೆ ಸಿದ್ದರಾಮಯ್ಯ ನಿರ್ದೇಶನ ನೀಡಿದರು.

ಚಿತ್ರನಗರಿಯಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಬೇಕು. ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಚಿತ್ರ ಪ್ರವಾಸೋದ್ಯಮಕ್ಕೂ ಒತ್ತು ನೀಡಬೇಕು ಎಂದು ಸೂಚಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕ್‌ ಚಂದ್ರ, ಆಯುಕ್ತ ಹೇಮಂತ್‌ ಎಂ. ನಿಂಬಾಳ್ಕರ್ ಸಭೆಯಲ್ಲಿ ಭಾಗವಹಿಸಿದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.