ADVERTISEMENT

ಸಚಿವ ಅಶ್ವತ್ಥನಾರಾಯಣ ವಿರುದ್ಧದ ಸಮನ್ಸ್‌ ರದ್ದು

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 19:30 IST
Last Updated 4 ಜನವರಿ 2022, 19:30 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ‘ಆಪರೇಷನ್ ಕಮಲದ ಕಾರಣಕ್ಕೆ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರಿಗೆ ₹ 30 ಕೋಟಿ ಲಂಚದ ಆಮಿಷ ಒಡ್ಡಲಾಗಿತ್ತು’ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ದಾಖಲಿಸಿದ್ದ ದೂರಿನ ಅನುಸಾರ ಜನಪ್ರತಿನಿಧಿಗಳ ಕೋರ್ಟ್‌ ಹೊರಡಿಸಿದ್ದ ಸಮನ್ಸ್‌ ಅನ್ನು ಹೈಕೋರ್ಟ್‌ ರದ್ದುಪಡಿಸಿದೆ.

‘ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ ಜಾರಿ ಮಾಡಿದ್ದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಸಚಿವ ಸಿ.ಎನ್ ಅಶ್ವತ್ಥನಾರಾಯಣ, ಶಾಸಕರಾದ ಶ್ರೀನಿವಾಸಗೌಡ, ಎಸ್.ಆರ್ ವಿಶ್ವನಾಥ್, ಸಿ.ಪಿ ಯೋಗೇಶ್ವರ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಸಕ್ಷಮ ಪ್ರಾಧಿಕಾರವಾದ, ವಿಧಾನಸಭೆ ಸಭಾಧ್ಯಕ್ಷರಿಂದ ಪೂರ್ವಾನುಮತಿ ಪಡೆಯಲು ದೂರುದಾರ ಟಿ.ಜೆ ಅಬ್ರಹಾಂ ಅವರಿಗೆ ನಿರ್ದೇಶಿಸಬೇಕು. ಪೂರ್ವಾನುಮತಿ ಸಿಕ್ಕ ಬಳಿಕ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸಬೇಕು’ ಎಂದು ನ್ಯಾಯಪೀಠವು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತು.

ADVERTISEMENT

ಪ್ರಕರಣವೇನು?: ‘ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ನಾಯಕರು ಕೋಲಾರ ಕ್ಷೇತ್ರದ ಜೆಡಿಎಸ್‌ ಶಾಸಕ ಶ್ರೀನಿವಾಸ್ ಗೌಡ ಅವರಿಗೆ ಪಕ್ಷಾಂತರ ಮಾಡಲು ಆರೋಪಿಗಳು ಹಣದ ಆಮಿಷವೊಡ್ಡಿದ್ದರು. ₹ 30 ಕೋಟಿ ಆಮಿಷವೊಡ್ಡಿ ಅದರಲ್ಲಿ ₹ 5 ಕೋಟಿ ಮುಂಗಡ ಪಾವತಿ ಮಾಡಿದ್ದರು’ ಎಂದು ಆರೋಪಿಸಿ ಟಿ.ಜೆ.ಅಬ್ರಹಾಂ ವಿಶೇಷ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.