ADVERTISEMENT

ಎಪಿಎಂಸಿ ವಹಿವಾಟು ಕುಸಿದಿಲ್ಲ: ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ

ಸೆಸ್‌ ದರ ಕಡಿಮೆ ಮಾಡಿದ್ದರಿಂದ ಸಂಗ್ರಹ ಪ್ರಮಾಣ ಕುಸಿತ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 9:31 IST
Last Updated 10 ಮಾರ್ಚ್ 2021, 9:31 IST
ಎಸ್‌.ಟಿ.ಸೋಮಶೇಖರ
ಎಸ್‌.ಟಿ.ಸೋಮಶೇಖರ   

ಬೆಂಗಳೂರು: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಎಪಿಎಂಸಿಗಳಲ್ಲಿ ವಹಿವಾಟು ಕುಸಿತವಾಗಿಲ್ಲ. ಆದರೆ, ಸೆಸ್‌ ಸಂಗ್ರಹದ ಪ್ರಮಾಣ ಕುಸಿದಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿಗಳಲ್ಲಿ ವಹಿವಾಟು ಕಡಿಮೆ ಆಗಿದೆ ಎಂಬುದರಲ್ಲಿ ಹುರುಳಿಲ್ಲ. ಸೆಸ್‌ ಪ್ರಮಾಣವನ್ನು ಕಡಿಮೆ ಮಾಡಿದ್ದರಿಂದ ಆದಾಯ ಕಡಿಮೆ ಆಗಿದೆ. ವಿಚಕ್ಷಣ ದಳವನ್ನು ರದ್ದು ಮಾಡಿದ್ದರಿಂದ, ಅದರಿಂದ ಬರುತ್ತಿದ್ದ ಆದಾಯವೂ ನಿಂತು ಹೋಗಿದೆ ಎಂದು ತಿಳಿಸಿದರು.

ಕೊಬ್ಬರಿ ಮಾರುಕಟ್ಟೆ, ಮೆಣಸಿನ ಮಾರುಕಟ್ಟೆ ಸೇರಿ ಎಲ್ಲ ರೀತಿಯ ಎಪಿಎಂಸಿ ಮಾರುಕಟ್ಟೆಗಳಲ್ಲಿ ವಹಿವಾಟು ಮೊದಲಿನಂತಯೇ ಇದೆ. ಈಗ ರೈತರು ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆ ಎಲ್ಲಿ ಸಿಗುತ್ತದೆಯೋ ಅಲ್ಲಿ ಮಾರಾಟ ಮಾಡಬಹುದಾಗಿದೆ. ಮಾರುಕಟ್ಟೆಯಿಂದ ಹೊರಗೆ ಮಾರಿದಾಗ ಸೆಸ್‌ ಪಾವತಿಸಬೇಕಾಗಿಲ್ಲ ಎಂದರು.

ADVERTISEMENT

ಆನೇಕಲ್‌ನಲ್ಲಿ 42 ಎಕರೆಯಲ್ಲಿ ಹಣ್ಣುಗಳ ಮಾರುಕಟ್ಟೆ ಮತ್ತು ದೇವನಹಳ್ಳಿಯಲ್ಲಿ 50 ಎಕರೆಯಲ್ಲಿ ಹೂವಿನ ಮಾರುಕಟ್ಟೆ ಸ್ಥಾಪಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದ ಈಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಸೋಮಶೇಖರ್‌ ಹೇಳಿದರು.

ಡಿಸಿಸಿ ಬ್ಯಾಂಕ್‌ಗಳಿಗೆ ಸರ್ಕಾರದಿಂದ ನಾಮನಿರ್ದೇಶನ:

ಡಿಸಿಸಿ ಬ್ಯಾಂಕಿನಲ್ಲಿ ಸರ್ಕಾರದ ಸಹಭಾಗಿತ್ವವನ್ನು ಪ್ರೋತ್ಸಾಹಿಸಲು ಹಾಗೂ ಷೇರು ಬಂಡವಾಳವನ್ನು ಹೆಚ್ಚಿಸುವ ಉದ್ದೇಶದಿಂದ 21 ಡಿಸಿಸಿ ಬ್ಯಾಂಕುಗಳಿಗೆ ತಲಾ ₹10 ಲಕ್ಷ ಗರಿಷ್ಠ ಮಿತಿಗೊಳಪಟ್ಟು ಶೇ 25 ರಷ್ಟು ಷೇರು ಬಂಡವಾಳ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಎಲ್ಲ ಡಿಸಿಸಿ ಬ್ಯಾಂಕ್‌ಗಳಿಗೂ ರಾಜಕೀಯ ನಾಮ ನಿರ್ದೇಶನ ಮಾಡಲಾಗುವುದು ಎಂದು ಅವರು ಹೇಳಿದರು.

ಕೃಷಿ, ನೀರಾವರಿ,ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ ಎಂದರು.

ಸಿದ್ದರಾಮಯ್ಯ ಕಾಲದಲ್ಲೇ ಹೆಚ್ಚು ಸಾಲ:

ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಅತಿ ಹೆಚ್ಚು ಸಾಲ ಮಾಡಲಾಗಿದೆ. 1953 ರಿಂದ 2013 ರವರೆಗೆ ರಾಜ್ಯ ಸರ್ಕಾರ ಪಡೆದ ಒಟ್ಟು ಸಾಲ ₹1.17 ಲಕ್ಷ ಕೋಟಿ. ಸಿದ್ದರಾಮಯ್ಯ ಅವರ ಐದು ವರ್ಷಗಳ ಅವಧಿಯಲ್ಲಿ ₹1.30 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದರು.

ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಾಗ ಪ್ರವಾಹದಿಂದ ಇಡೀ ರಾಜ್ಯ ತತ್ತರಿಸಿತ್ತು. ಅದರ ಬಳಿಕ ಕೋವಿಡ್‌ ಬಂದ ಕಾರಣ ಸರ್ಕಾರ ಅನಿವಾರ್ಯವಾಗಿ ಸಾಲ ಮಾಡಬೇಕಾಯಿತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.