ಬೆಂಗಳೂರು: ‘ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಮೇ 12 ರಂದು ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ವರ್ಗಾವಣೆ ಆದೇಶಗಳನ್ನು ಹೊರಡಿಸಬೇಕು’ ಎಂದು ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ.
ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವರ್ಗಾವಣೆ ಆದೇಶ ಹೊರಡಿಸಿದ ಕಾರಣಕ್ಕೆ ಕೆಎಟಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಯಾವುದೇ ವರ್ಗಾವಣೆ ಆದೇಶ ಹೊರಡಿಸುವ ಮೊದಲು ಆಕ್ಷೇಪ ವ್ಯಕ್ತವಾಗದಂತೆ ಎಚ್ಚರಿಕೆ ವಹಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.
ಕನಿಷ್ಠ ಅವಧಿ ಪೂರ್ಣಗೊಳಿಸದವರನ್ನು, ನಿವೃತ್ತಿಗೆ ಎರಡು ವರ್ಷಕ್ಕಿಂತ ಕಡಿಮೆ ಅವಧಿ ಇರುವವರನ್ನು ವರ್ಗಾವಣೆ ಮಾಡಬಾರದು. ಸಕಾರಣ ಇಲ್ಲದೆ ಅವಧಿಗೂ ಮೊದಲು ವರ್ಗಾವಣೆಗೆ ಅವಕಾಶ ಇಲ್ಲ. ಅಂಗವಿಕಲರಿಗೆ ನೀಡುವ ವಿನಾಯಿತಿಗಳನ್ನು ಅನುಸರಿಸಬೇಕು. ವರ್ಗಾವಣೆ ಆದೇಶದಲ್ಲಿ ಹುದ್ದೆಯನ್ನು ತೋರಿಸದಿರುವುದು, ಸಾಮಾನ್ಯ ವರ್ಗಾವಣೆ ಅವಧಿ ಮುಗಿದ ಬಳಿಕ ಮುಖ್ಯಮಂತ್ರಿಯ ಅನುಮೋದನೆ ಪಡೆಯದೆ ವರ್ಗಾವಣೆ ಆದೇಶ ಹೊರಡಿಸುವುದು ಸೇರಿದಂತೆ ಮಾರ್ಗಸೂಚಿಯಲ್ಲಿರುವ ಅಂಶಗಳನ್ನು ಪಾಲಿಸಬೇಕು ಎಂದೂ ಅವರು ನಿರ್ದೇಶನ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.