ADVERTISEMENT

ಶಾಸಕರಿಗೆ ₹30 ಕೋಟಿ ಆಮಿಷ; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 20:09 IST
Last Updated 30 ಡಿಸೆಂಬರ್ 2018, 20:09 IST
ವಿಧಾನಸಭೆಯಲ್ಲಿ ಸಿದ್ದರಾಮಯ್ಯ– ಪ್ರಜಾವಾಣಿ ಸಂಗ್ರಹ ಚಿತ್ರ
ವಿಧಾನಸಭೆಯಲ್ಲಿ ಸಿದ್ದರಾಮಯ್ಯ– ಪ್ರಜಾವಾಣಿ ಸಂಗ್ರಹ ಚಿತ್ರ   

ಮೈಸೂರು/ ಬೆಂಗಳೂರು: ಸಂಪುಟ ಪುನಾರಚನೆ ಬಳಿಕ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿಕೊಳ್ಳುತ್ತಲೇ ಬಂದಿರುವ ಕಾಂಗ್ರೆಸ್‌ ನಾಯಕರಿಗೆ ಬಿಜೆಪಿ ಸದ್ದಿಲ್ಲದೆ ‘ಆಪರೇಷನ್‌ ಕಮಲ’ಕ್ಕೆ ಕೈ ಹಾಕಿರುವ ಅವ್ಯಕ್ತ ಆತಂಕ ಈಗ ಎದುರಾಗಿದೆ.

ಸಂಪುಟದಿಂದ ಕೈ ಬಿಟ್ಟ ಕಾರಣಕ್ಕೆ ಮುನಿಸಿಕೊಂಡಿರುವ ಪಕ್ಷದ ಹಿರಿಯ ಶಾಸಕ ರಮೇಶ ಜಾರಕಿಹೊಳಿ ಯಾರ ಕೈಗೂ ಸಿಕ್ಕಿಲ್ಲ. ಅವರು ತಮ್ಮ ಕೆಲವು ಆಪ್ತ ಶಾಸಕರ ಜೊತೆ ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ರಹಸ್ಯವಾಗಿ ಬೀಡು ಬಿಟ್ಟಿರುವುದು ‘ದೋಸ್ತಿ’ (ಜೆಡಿಎಸ್‌– ಕಾಂಗ್ರೆಸ್‌) ನಾಯಕರ ತಳಮಳಕ್ಕೆ ಕಾರಣವಾಗಿದೆ.

ರಮೇಶ ಜಾರಕಿಹೊಳಿ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದು, ಅವರ ಜೊತೆ ಶಾಸಕರಾದ ಕಾಂಗ್ರೆಸ್‌ನ ಬಿ. ನಾಗೇಂದ್ರ, ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ, ಪಕ್ಷೇತರ ಶಾಸಕ ಆರ್.ಶಂಕರ್‌ ಕೂಡಾ ಇದ್ದಾರೆ. ಬಿ. ಶ್ರೀರಾಮುಲು ಅವರ ಮೂಲಕ ಪಕ್ಷದ ಹಿರಿಯ ನಾಯಕ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರನ್ನು ರಮೇಶ ಜಾರಕಿಹೊಳಿ ಭೇಟಿ ಮಾಡಿರುವ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ಸುದ್ದಿ ಹಬ್ಬಿದೆ.

ADVERTISEMENT

ಬಿಜೆಪಿ ಶಾಸಕರ ಖರೀದಿ ಯತ್ನ ಮಾಡುತ್ತಿದೆ ಎಂಬ ವದಂತಿಗಳಿಗೆ ಪುಷ್ಟಿ ನೀಡುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮೈಸೂರಿನಲ್ಲಿ ಭಾನುವಾರ ಮಾತನಾಡಿದ ಅವರು, ’ಶಾಸಕರಿಗೆ ₹ 25 ಕೋಟಿಯಿಂದ ₹ 30 ಕೋಟಿ ನೀಡಿ ಖರೀದಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಕುದುರೆ ವ್ಯಾಪಾರ ಮಾಡಲು ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ? ಅವರು ಭ್ರಷ್ಟರು. ಹೀಗಾಗಿ, ಇಂಥ ಪ್ರಯತ್ನಕ್ಕೆ ಇಳಿದಿದ್ದಾರೆ’ ಎಂದು ಆರೋಪಿಸಿದರು. ಟ್ವೀಟ್‌ನಲ್ಲೂ ಅವರು ಇದೇ ಮಾತುಗಳನ್ನು ಪುನರುಚ್ಚರಿಸಿದ್ದಾರೆ.

ಎಲ್ಲ ಸುದ್ದಿ ಅಂತೆಕಂತೆ: ‘ರಮೇಶ ಜಾರಕಿಹೊಳಿ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅವರ ವಿಚಾರದಲ್ಲಿ ಕೇಳಿಬರುತ್ತಿರುವ ಸುದ್ದಿಗಳೆಲ್ಲಾ ಅಂತೆಕಂತೆಗಳು’ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಡಾ.ಕೆ.ಸುಧಾಕರ್‌ ನೇಮಕ ಸಂಬಂಧ ಪ್ರತಿಕ್ರಿಯಿಸಿ, ‘ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಏನಿದೆ ಎಂಬುದನ್ನು ಪರಾಮರ್ಶಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಇನ್ನುಳಿದ ನಿಗಮ ಮಂಡಳಿಗಳ ಅಧ್ಯಕ್ಷ ನೇಮಕಕ್ಕೆ ಮುಖ್ಯಮಂತ್ರಿ ಸಹಿ ಮಾಡುತ್ತಾರೆ. ನಮ್ಮ ಪಟ್ಟಿ ಕಳಿಸಲಾಗಿದೆ. ಜೆಡಿಎಸ್‌ ಪಟ್ಟಿ ಸೇರಿಸಿ ಒಟ್ಟಿಗೆ ಸಹಿ ಮಾಡುತ್ತಾರೆ’ ಎಂದರು.

ದಲಿತರಿಗೆ ಅಧಿಕಾರ ನೀಡುವಲ್ಲಿ ಕಾಂಗ್ರೆಸ್‌ ಹಿಂದೇಟು ಹಾಕುತ್ತಿದೆ ಎಂದಿರುವ ಎಚ್‌.ಡಿ.ರೇವಣ್ಣ ಹೇಳಿಕೆಗೆ, ‘ಆರ್‌.ವಿ. ದೇಶಪಾಂಡೆ ಈಗಾಗಲೇ ಉತ್ತರ ನೀಡಿದ್ದಾರೆ. ಅದು ನಮ್ಮ ಪಕ್ಷದ ನಿಲುವೂ ಕೂಡ. ಇನ್ನೇನೂ ಮಾತನಾಡುವುದಿಲ್ಲ’ ಎಂದು ಹೇಳಿದರು.

ಸಿದ್ದರಾಮಯ್ಯ ಅವರನ್ನು 'ಮಿಸ್ಟರ್‌ ಟ್ವಿಟರಾಮಯ್ಯ' ಎಂದಬಿಜೆಪಿ

'ನಮ್ಮ ಪಕ್ಷದ ಶಾಸಕರಿಗೆ ₹ 30 ಕೋಟಿ ಹಣದ ಆಮಿಷ ಒಡ್ಡಲಾಗಿದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಆರೋಪವನ್ನು ಬಿಜೆಪಿ ನಿರಾಕರಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ‘ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕಾಂಗ್ರೆಸ್‌ನ ಯಾವ ಶಾಸಕರಿಗೆ ಹಣದ ಆಮಿಷ ಒಡ್ಡಲಾಗಿದೆ ಎಂಬುದನ್ನು ಸಿದ್ದರಾಮಯ್ಯ ಅವರು ತಿಳಿಸಲಿ’ ಎಂದು ಸವಾಲು ಹಾಕಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಹಿಡಿತ ಸಾಧಿಸಲು ಸಿದ್ದರಾಮಯ್ಯ ಅವರು ಇಬ್ಬರನ್ನು ಕೈಬಿಟ್ಟು, ತಮಗೆ ಬೇಕಾದವರನ್ನು ಸಂಪುಟಕ್ಕೆ ಸೇರಿಸಿದ್ದಾರೆ. ಪಕ್ಷದ ವಿರುದ್ಧ ಅವರ ಶಾಸಕರೇ ತಿರುಗಿ ಬಿದ್ದಿದ್ದಾರೆ. ಅಸಮಾಧಾನಗೊಂಡ ಶಾಸಕರನ್ನು ಸಮಾಧಾನ ಮಾಡುವುದು ಬಿಟ್ಟು ಬಿಜೆಪಿಯನ್ನು ಅಪರಾಧ ಸ್ಥಾನದಲ್ಲಿ ನಿಲ್ಲಿಸುವುದೇಕೆ ಎಂದು ಶೋಭಾ ಪ್ರಶ್ನಿಸಿದ್ದಾರೆ.

ಧೀರನೂ ಅಲ್ಲ ಶೂರನೂ ಅಲ್ಲ: ‘ಕುದುರೆ ಏರಲಾಗದವನು ಧೀರನೂ ಅಲ್ಲ ಶೂರನೂ ಅಲ್ಲ. ನಿಮ್ಮ ಪಕ್ಷದ ಪ್ರಹಸನ ಮುಚ್ಚಿ ಹಾಕಲು ಹೊಸ ಪ್ರಹಸನ ಆರಂಭಿಸಿದ್ದೀರಿ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದ್ದಾರೆ.

‘ಮುಲಾಜಿನ ಸರ್ಕಾರ ನಡೆಸಲು ಮುಖ್ಯಮಂತ್ರಿಗಳ ಜತೆ ಕೈ ಜೋಡಿಸಿದ್ದೀರಿ. ನಿಮ್ಮ ಮಾತು ನಂಬಲು ಕನ್ನಡಿಗರು ಮುಗ್ದರಲ್ಲ’ ಎಂದು ಸದಾನಂದಗೌಡ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸ್ಥಾನ ಹೊಂದಾಣಿಕೆ ಚರ್ಚೆ ಆಗಿಲ್ಲ: ಖರ್ಗೆ

‘ಲೋಕಸಭೆ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ಬಗ್ಗೆ ಜೆಡಿಎಸ್‌ ಜೊತೆ ಯಾವುದೇ ಚರ್ಚೆ ಆಗಿಲ್ಲ. ನಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ’ ಎಂದು ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ರಾಜ್ಯದಲ್ಲಿ 12 ಸ್ಥಾನಗಳಲ್ಲಿ ಪಕ್ಷ ಕಣಕ್ಕಿಳಿಯಲಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಜೆಡಿಎಸ್ ವರಿಷ್ಠರಾಗಿ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅದರಲ್ಲಿ ತಪ್ಪಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಪರಸ್ಪರ ಚರ್ಚೆ ನಡೆದ ಬಳಿಕ ಯಾರಿಗೆ ಎಷ್ಟು ಸ್ಥಾನ ಎಂಬುದು ಗೊತ್ತಾಗಲಿದೆ. ಪ್ರಜಾ ಪ್ರಜಾಪ್ರಭುತ್ವದ ಒಳಿತಿಗಾಗಿ ಜಾತ್ಯತೀತ ಪಕ್ಷಗಳು ಒಂದಾಗಬೇಕಿದೆ’ ಎಂದರು.

‘ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಅದು ಯಶಸ್ವಿಯಾಗದು’ ಎಂದರು.

ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಜೆಡಿಎಸ್ ಜೊತೆ ಸ್ಥಾನ ಹೊಂದಾಣಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಚಾರ ನಮ್ಮ‌ ಗಮನಕ್ಕೆ ಇನ್ನೂ ಬಂದಿಲ್ಲ. ಬಹುಶಃ ರಾಹುಲ್ ಗಾಂಧಿ ಮತ್ತು ದೇವೇಗೌಡರ ಮಧ್ಯೆ ಮಾತುಕತೆ ನಡೆದಿರಲೂಬಹುದು’ ಎಂದರು.

* ಬಿಜೆಪಿ ಮುಖಂಡರಿಗೆ ಬರೀ ಕೆಟ್ಟ ಆಸೆಗಳು. ಸರ್ಕಾರ ಬೀಳಿಸುವ ಪ್ರಯತ್ನ ಹೊರತುಪಡಿಸಿ ವಿರೋಧ ಪಕ್ಷವಾಗಿ ಇಷ್ಟು ದಿನ ಬೇರೆ ಏನು ಮಾಡಿದ್ದಾರೆ?

- ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

* 25 ವರ್ಷಗಳಿಂದ ರಮೇಶ ಜಾರಕಿಹೊಳಿ ಪಕ್ಷದಲ್ಲಿದ್ದಾರೆ. ದ್ರೋಹ ಮಾಡುವಂಥ ನಿರ್ಧಾರ ಅವರು ತೆಗೆದುಕೊಳ್ಳಲ್ಲವೆಂಬ ನಂಬಿಕೆ ಇದೆ

- ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ

ಟ್ವಿಟರ್‌ನಲ್ಲಿ:ಪ್ರತ್ಯೇಕ ಧರ್ಮ ಮಾಡಿ ಎಂದವರು ಬೆಂಬಲಕ್ಕೆ ಬರಲೇ ಇಲ್ಲ– ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.