ADVERTISEMENT

ಸಂಪರ್ಕ ಸೇತುವೆಗೆ ಹಾನಿ

ನಿವಾಸಿಗಳೇ ಹಣ ಹಾಕಿ ನಿರ್ಮಿಸಿದ್ದ ಉಳಿಯ- ಅಡ್ಯಾರು ಸೇತುವೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 19:27 IST
Last Updated 2 ಫೆಬ್ರುವರಿ 2019, 19:27 IST
ಹಾನಿಯಾಗಿರುವ ತಾತ್ಕಾಲಿಕ ಸೇತುವೆಯನ್ನು ಸಚಿವ ಯು.ಟಿ. ಖಾದರ್ ವೀಕ್ಷಿಸಿದರು
ಹಾನಿಯಾಗಿರುವ ತಾತ್ಕಾಲಿಕ ಸೇತುವೆಯನ್ನು ಸಚಿವ ಯು.ಟಿ. ಖಾದರ್ ವೀಕ್ಷಿಸಿದರು   

ಮುಡಿಪು (ದಕ್ಷಿಣ ಕನ್ನಡ): ಪಾವೂರು– ಉಳಿಯ ದ್ವೀಪ ನಿವಾಸಿಗಳು ನಗರ ಸಂಪರ್ಕಕ್ಕೆಂದು ಸ್ವಂತ ಹಣ ಖರ್ಚು ಮಾಡಿ ಕಟ್ಟಿದ್ದ ತಾತ್ಕಾಲಿಕ ಸೇತುವೆಯನ್ನು ಕಿಡಿಗೇಡಿಗಳು ಶುಕ್ರವಾರ ರಾತ್ರಿ ಧ್ವಂಸ ಮಾಡಿದ್ದು, ಸ್ಥಳೀಯರ ವಾಹನಗಳನ್ನು ಜಖಂ ಮಾಡಿದ್ದಾರೆ.

ಪಾವೂರು ನೇತ್ರಾವತಿ ನದಿಯ ಉಳಿಯ ದ್ವೀಪ ಪ್ರದೇಶದಲ್ಲಿ ಸುಮಾರು 40 ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿನ ನಿವಾಸಿಗಳು ಮಂಗಳೂರಿಗೆ ಅಥವಾ ಪಾವೂರಿಗೆ ಬರಲು ದೋಣಿ ಹಾಗೂ ಇತರ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು.

ಉಳಿಯ ನಿವಾಸಿಗಳು ಕೆಲ ದಿನಗಳ ಹಿಂದಷ್ಟೇ ಸ್ಥಳೀಯ ಚರ್ಚ್ ಧರ್ಮಗುರುವಿನ ನೇತೃತ್ವದಲ್ಲಿ ತಮ್ಮ ಸ್ವಂತ ಹಣದಿಂದಲೇ ಸುಸಜ್ಜಿತ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದರು.

ADVERTISEMENT

ಶುಕ್ರವಾರ ರಾತ್ರಿ ಸೇತುವೆಯ ಹಲಗೆ ಮತ್ತು ಹ್ಯಾಂಡ್ ರೇಲಿಂಗ್‌ಗಳನ್ನು ಕಿತ್ತು ಹಾನಿ ಮಾಡಲಾಗಿದೆ. ಸ್ಥಳೀಯರು ಪಾರ್ಕ್ ಮಾಡಿದ್ದ ಒಂದು ರಿಕ್ಷಾ, ಸ್ಕೂಟರ್, ಎರಡು ಬೈಕ್‌ಗಳನ್ನು ಜಖಂಗೊಳಿಸಲಾಗಿದೆ.

ಸಚಿವ ಖಾದರ್ ಭೇಟಿ: ಸೇತುವೆ ಹಾನಿಗೊಳಗಾದ ಉಳಿಯ ಪ್ರದೇಶಕ್ಕೆ ಶನಿವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಭೇಟಿ ನೀಡಿದರು. ದುಷ್ಕರ್ಮಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲು ಹಾಗೂ ಸೇತುವೆ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿ
ಸಲು ಪೊಲೀಸರಿಗೆ ಸೂಚನೆ ನೀಡಿದರು.

ಮರಳು ಮಾಫಿಯಾದ ಕೃತ್ಯ ಶಂಕೆ: ಅಡ್ಯಾರಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಅಡ್ಡೆಗೆ ಶುಕ್ರವಾರ ಬೆಳಿಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ದಾಳಿ ನಡೆಸಿ, ಅಪಾರ ಮರಳನ್ನು ವಶಪಡಿಸಿಕೊಂಡಿದ್ದರು.

ದಾಳಿ ಮಾಡುವ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳಿಗೆ ಉಳಿಯ ಸ್ಥಳೀಯರು ಪ್ಯಾಸೆಂಜರ್ ಬೋಟ್‌ ಅನ್ನು ನೀಡಿದ್ದರು. ಆಪರೇಟರ್‌ಗಳಿಂದಲೇ ಬೋಟ್ ಚಲಾಯಿಸಿದ್ದರು ಎನ್ನಲಾಗಿದೆ. ಉಳಿಯ ನಿವಾಸಿಗಳೇ ಇಲಾಖೆಗೆ ಮಾಹಿತಿ ನೀಡಿದ್ದಾರೆಂದು ಗ್ರಹಿಸಿದ ಕಿಡಿಗೇಡಿಗಳು, ಸೇತುವೆಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.