ADVERTISEMENT

ನವೋದಯ ವಿದ್ಯಾಲಯದ ಕೊರೊನಾ ಸೋಂಕಿತರ ಸಂಖ್ಯೆ 103ಕ್ಕೆ

ಮಂಗಳೂರಿನಲ್ಲೂ 9 ವಿದ್ಯಾರ್ಥಿಗಳಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 1:47 IST
Last Updated 7 ಡಿಸೆಂಬರ್ 2021, 1:47 IST
   

ಮಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಸೀಗೊಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 103ಕ್ಕೆ ಏರಿದೆ. ಇದರ ಜತೆಯಲ್ಲೇ ಮಂಗಳೂರಿನ ಡಾ. ಎಂ.ವಿ. ಶೆಟ್ಟಿ ಅರೆವೈದ್ಯಕೀಯ ಕಾಲೇಜಿನಲ್ಲೂ 9 ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢಪಟ್ಟಿದೆ.

ಜವಾಹರ್ ನವೋದಯ ವಿದ್ಯಾಲಯದಲ್ಲಿ ಸೋಮವಾರ ಇನ್ನೂ 34 ಮಂದಿಗೆ ಕೋವಿಡ್‌ ದೃಢಪಟ್ಟಿದೆ. 448 ಮಂದಿಯ ಮಾದರಿ ಪರೀಕ್ಷೆ ನಡೆದಿತ್ತು. ಈವರೆಗೆ 92 ವಿದ್ಯಾರ್ಥಿಗಳು, 9 ಶಿಕ್ಷಕರು ಹಾಗೂ ಇಬ್ಬರು ಪೋಷಕರು ಸೇರಿ 103 ಮಂದಿಗೆ ಸೋಂಕು ದೃಢಪಟ್ಟಿದೆ.

‘ಎಲ್ಲ 103 ಮಂದಿ ಮಾದರಿಯನ್ನು ‘ಜಿನೋಮ್‌ ಸಿಕ್ವೆನ್ಸ್‌’ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಿದ್ದು, ವರದಿ ನಿರೀಕ್ಷಿಸಲಾಗಿದೆ’ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌ ತಿಳಿಸಿದರು.

ADVERTISEMENT

‘ಸಿಬ್ಬಂದಿಗೆ ವಸತಿ ಗೃಹದಲ್ಲಿ, ವಿದ್ಯಾರ್ಥಿಗಳಿಗೆ ವಿದ್ಯಾಲಯದ ವಿವಿಧ ಬ್ಲಾಕ್‌ಗಳಲ್ಲಿ ಪ್ರತ್ಯೇಕ ವಾಸದ ವ್ಯವಸ್ಥೆ ಮಾಡಲಾಗಿದೆ. ಸೋಂಕು ದೃಢಪಟ್ಟಿರುವ ಯಾರಿಗೂ ರೋಗಲಕ್ಷಣಗಳಿರಲಿಲ್ಲ‘ ಎಂದು ಮಾಹಿತಿ ನೀಡಿದರು.

ಮಂಗಳೂರಿನ ಎಂ.ವಿ. ಶೆಟ್ಟಿ ಅರೆವೈದ್ಯಕೀಯ ಕಾಲೇಜಿನಲ್ಲಿ 173 ಮಂದಿಯ ಗಂಟಲುದ್ರವ ಪರೀಕ್ಷೆ ಮಾಡಿದ್ದು, ಅವರಲ್ಲಿ ಭಾನುವಾರ 7 ಮಂದಿಗೆ ಹಾಗೂ ಸೋಮವಾರ ಇಬ್ಬರಿಗೆ ಕೋವಿಡ್‌
ದೃಢಪಟ್ಟಿದೆ.

‘ಬಾಲಕರು ಮತ್ತು ಬಾಲಕಿಯರ ಹಾಸ್ಟೆಲ್‌ ಅನ್ನು ಕಂಟೈನ್‌ಮೆಂಟ್‌ ಪ್ರದೇಶ ಎಂದು ಘೋಷಿಸಲಾಗಿದೆ. ಮಾದರಿಗಳನ್ನು ಜಿನೋಮ್‌ ಸಿಕ್ವೆನ್ಸ್‌ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.