ADVERTISEMENT

ಕೋಳಿವಾಡ, ಮೂರ್ತಿ ವಿರುದ್ಧ ದೂರು

ವಿಧಾನಸಭೆ ಸಚಿವಾಲಯದ ನೇಮಕಾತಿ ಹಗರಣ

​ಪ್ರಜಾವಾಣಿ ವಾರ್ತೆ
Published 26 ಜೂನ್ 2018, 20:11 IST
Last Updated 26 ಜೂನ್ 2018, 20:11 IST

ಬೆಂಗಳೂರು: ‘ರಾಜ್ಯ ವಿಧಾನಸಭೆ ಸಚಿವಾಲಯದಲ್ಲಿ ಅಕ್ರಮವಾಗಿ ನೇಮಕಾತಿ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ಹಿಂದಿನ ಸ್ಪೀಕರ್‌ ಕೆ.ಬಿ. ಕೋಳಿವಾಡ, ವಿಶೇಷ ಕರ್ತವ್ಯಾಧಿಕಾರಿ ಆಗಿದ್ದ ತಿಪ್ಪೇಸ್ವಾಮಿ ಮತ್ತು ಸಚಿವಾಲಯ ಕಾರ್ಯದರ್ಶಿ ಎಸ್‌. ಮೂರ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆರ್‌ಟಿಐ ಕಾರ್ಯಕರ್ತ ಪ್ರಸನ್ನ ಕುಮಾರ್‌ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ವಿಧಾನಸಭೆ ಸಚಿವಾಲಯದ 191 ವಿವಿಧ ಹುದ್ದೆಗಳಿಗೆ ಫೆಬ್ರುವರಿ 23ರಿಂದ 25ರವರೆಗೆ ತರಾತುರಿಯಲ್ಲಿ ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗಿದೆ. ಇದರಲ್ಲಿ ಭಾರಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ. ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಹುದ್ದೆಗಳನ್ನು ಸೃಷ್ಟಿಸುವಂತಿಲ್ಲ. ಆದರೆ, ವಿಧಾನಸಭೆಗೆ ಮತದಾನ ನಡೆಯುವ ಒಂದು ವಾರ ಮೊದಲು 107 ಹುದ್ದೆಗಳನ್ನು ಸೃಷ್ಟಿಸಿ, ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದೂ ದೂರಲಾಗಿದೆ.

ADVERTISEMENT

ಸಾಮಾನ್ಯವಾಗಿ ವಿಧಾನಸಭೆ ಸಚಿವಾಲಯದ ಅಗತ್ಯಗಳನ್ನು ನೋಡಿಕೊಂಡು, ನಿಯಮಗಳಿಗೆ ಅನುಗುಣವಾಗಿ ನೇಮಕಾತಿ ನಡೆಯಲಿದೆ. ಆದರೆ, ಕೋಳಿವಾಡರ ಅವಧಿ ಮುಗಿಯುವ ಹಂತದಲ್ಲಿ ಬೇಕಾಬಿಟ್ಟಿಯಾಗಿ ನೇಮಕಾತಿ ಮಾಡಿಕೊಳ್ಳುವಮೂಲಕ, ವಿಧಾನಸಭೆ ಅಧ್ಯಕ್ಷರ ಪರಮಾಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಈ ನೇಮಕಾತಿಯಲ್ಲಿ ಯಾವುದೇ ರೋಸ್ಟರ್‌ ಪದ್ಧತಿ ಪಾಲಿಸಿಲ್ಲ. ಅಲ್ಲದೆ, ಅಗತ್ಯ ಮೀರಿ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

‘ಅಕ್ರಮ ನಡೆದಿಲ್ಲ’

‘ಪ್ರತಿಯೊಬ್ಬರಿಗೂ ಲೋಕಾಯುಕ್ತಕ್ಕೆ ದೂರು ಕೊಡುವ ಹಕ್ಕಿದೆ. ಅವರ ಹಕ್ಕನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ, ನೇಮಕಾತಿ ಪಾರದರ್ಶಕ ವಾಗಿಯೇ ನಡೆದಿವೆ. ಸಾಮಾನ್ಯ ನೇಮಕಾತಿ ನಿಯಮಗಳಡಿಯಲ್ಲೇ ಪ್ರಕ್ರಿಯೆ ನಡೆಸಲಾಗಿದೆ. ಮೀಸಲಾತಿ ನಿಯಮಗಳನ್ನು ಪಾಲಿಸಲಾಗಿದೆ’ ಎಂದು ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಸ್ಪಷ್ಟಪಡಿಸಿದ್ದಾರೆ.

‘ನೇಮಕಾತಿಗಳಲ್ಲಿ ಸ್ವಜನ ಪಕ್ಷಪಾತ ಅಥವಾ ಅಕ್ರಮ ನಡೆದಿಲ್ಲ. ಅರ್ಹತೆ ಆಧರಿಸಿ ಅಗತ್ಯ ಸಂಖ್ಯೆಗೆ ಅನುಗುಣವಾಗಿ ನೇಮಕಾತಿ ಮಾಡಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.