ADVERTISEMENT

‘ಕಾನ್‌ಕಾರ್ಡ್‌’ ಜಮೀನು ಹಂಚಿಕೆ ಅಕ್ರಮ: ಆರೋಪ

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ ತನಿಖೆ: ಸಚಿವ ಮುರುಗೇಶ ನಿರಾಣಿ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 19:56 IST
Last Updated 30 ಮಾರ್ಚ್ 2022, 19:56 IST
ಮರಿತಿಬ್ಬೇಗೌಡ
ಮರಿತಿಬ್ಬೇಗೌಡ   

ಬೆಂಗಳೂರು: ಸಾದರಮಂಗಲ (ವೈಟ್ ಫೀಲ್ಡ್) ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಕಾನ್‌ಕಾರ್ಡ್‌ ಸಂಸ್ಥೆಗೆ ನೀಡಿರುವ ಜಮೀನಿಗೆ ಸಂಬಂಧಿಸಿದಂತೆ ವ್ಯಾಪಕ ಅಕ್ರಮಗಳು ನಡೆದಿವೆ. ಈ ಬಗ್ಗೆ ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಬುಧವಾರ ವಿಧಾನ ಪರಿಷತ್‌ನಲ್ಲಿ ಒತ್ತಾಯಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು, ‘1,696 ಕೋಟಿ ಮೌಲ್ಯದ 78 ಎಕರೆ ಜಮೀನನ್ನು ಕೇವಲ ₹39 ಕೋಟಿಗೆ ನೀಡಲಾಗಿದೆ. ಕೈಗಾರಿಕೆ ಹೆಸರಿನಲ್ಲಿ ಭೂಮಿ ಪಡೆದು ರಿಯಲ್‌ ಎಸ್ಟೇಟ್‌ ದಂಧೆ ನಡೆಸಿ ಸರ್ಕಾರಕ್ಕೂ ವಂಚನೆ ಮಾಡಲಾಗಿದೆ’ ಎಂದು ದೂರಿದರು.

‘ಸುಮಾರು ₹50 ಕೋಟಿ ಮೌಲ್ಯದ ಮರಗಳು ಈ ಪ್ರದೇಶದಲ್ಲಿದ್ದವು. ಈ ಮರಗಳ ಮೌಲ್ಯದ ಮೊತ್ತವನ್ನು ಸಹ ಸರ್ಕಾರಕ್ಕೆ ನೀಡಿಲ್ಲ. ಸರ್ಕಾರ ಈ ಕಂಪನಿಗೆ ಮಂಜೂರು ಮಾಡಿರುವ ಭೂಮಿಯನ್ನು ರದ್ದುಪಡಿಸಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ವಿರೋಧ ಪಕ್ಷದ ನಾಯಕ ಹರಿಪ್ರಸಾದ್‌, ‘ಈ ಪ್ರಕರಣ
ದಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದು, ಸದನ ಸಮಿತಿ ರಚಿಸಿ’ ಎಂದು ಒತ್ತಾಯಿಸಿದರು.

ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಪ್ರತಿಕ್ರಿಯಿಸಿ, ‘ಮೇಲ್ನೋಟಕ್ಕೆ ಕಂಪನಿ ತಪ್ಪು ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ಸಮಗ್ರವಾಗಿ ಸರ್ವೇ ಮಾಡಿಸಲಾಗುವುದು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ ತನಿಖೆ ನಡೆಸಲಾಗುವುದು. ಯಾರನ್ನೂ ರಕ್ಷಿಸುವ ಉದ್ದೇಶ ಇಲ್ಲ’ ಎಂದು ಸಚಿವರು ಭರವಸೆ ನೀಡಿದರು.

‘2007ರಲ್ಲಿ ಪ್ರತಿ ಎಕರೆಗೆ ₹50 ಲಕ್ಷದಂತೆ 78 ಎಕರೆಯನ್ನು ಈ ಕಂಪನಿಗೆ ಕೆಐಎಡಿಬಿ ಜಮೀನು ಹಂಚಿಕೆ ಮಾಡಿತ್ತು. ನಂತರ, ಕಂಪನಿಯು ಎಂಬೆಸ್ಸಿ ಈಸ್ಟ್‌ ಬ್ಯುಸಿನೆಸ್‌ ಪಾರ್ಕ್‌ ಪ್ರೈವೇಟ್‌ ಲಿಮಿಟೆಡ್‌ ಎಂದು ಬದಲಾಯಿಸಿತ್ತು. ಸಹೋದರ ಸಂಸ್ಥೆಗಳಾಗಿರುವುದರಿಂದ ನಿರ್ದೇಶಕರು ಬದಲಾಗಿಲ್ಲ ಎನ್ನುವ ಸಮರ್ಥನೆ
ಯನ್ನು ಕಂಪನಿ ನೀಡಿದೆ’ ಎಂದು ವಿವರಿಸಿದರು.

‘ದಾಬಸ್‌‍ಪೇಟೆಯಲ್ಲೂ ಎಂಬೆಸ್ಸಿ ಇಂಡಸ್ಟ್ರಿಯಲ್‌ ಪಾರ್ಕ್‌ ಕಂಪನಿಗೆ 2021ರ ಜೂನ್‌ 3ರಂದು 125 ಎಕರೆ ಜಮೀನು ನೀಡಲಾಗಿದೆ. ಪ್ರತಿ ಎಕರೆಗೆ ₹1.5 ಕೋಟಿ ಮೌಲ್ಯ ನಿಗದಿಪಡಿ
ಸಲಾಗಿತ್ತು. ಆಗ ಒಟ್ಟು ಮೊತ್ತದಲ್ಲಿನ ಶೇ 30ರಷ್ಟು ಮುಂಗಡ ಹಣವಾದ ₹57.37 ಕೋಟಿ ಪಾವತಿಸಿಕೊಂಡು ಜಮೀನು ಹಂಚಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಷರತ್ತುಗಳ ಅನ್ವಯ ಈ ಕಂಪನಿ 2021ರ ಸೆಪ್ಟೆಂಬರ್‌ 3ರ ಒಳಗೆ ಬಾಕಿ ಉಳಿದಿದ್ದ ₹136.77 ಕೋಟಿ ಮೊತ್ತವನ್ನು ಪಾವತಿಸಬೇಕಾಗಿತ್ತು. ಆದರೆ, ಕಂಪನಿಯು ನಿವೇಶನದ ಆಕಾರ ಬದಲಾಯಿಸಲು ಕೋರಿತ್ತು. ಈ ಕಂಪನಿಗೆ ಹಂಚಿಕೆಯಾದ ಜಮೀನಿನ ಪೈಕಿ ಮೂರು ಎಕರೆ ಜಮೀನಿನ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಪ್ರತಿ ಎಕರೆಗೆ ₹ 1.39 ಕೋಟಿ ಬಾಕಿ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸಲು ಸೂಚಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.