ADVERTISEMENT

ಅಮಿತ್‌ ಶಾ ಕಾರ್ಯಕ್ರಮಕ್ಕೆ ಕ್ಷಣಗಣನೆ; ನೆಹರೂ ಕ್ರೀಡಾಂಗಣದ ಸುತ್ತಲೂ ಸರ್ಪಗಾವಲು

ಪೌರತ್ವ (ತಿದ್ದುಪಡಿ) ಕಾಯ್ದೆ ಜನಜಾಗೃತಿ ಸಮಾವೇಶ ಇಂದು

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 20:15 IST
Last Updated 17 ಜನವರಿ 2020, 20:15 IST
ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಜನಜಾಗೃತಿ ಸಮಾವೇಶದ ಬಂದೋಬಸ್ತ್‌ಗೆ ಶುಕ್ರವಾರ ಸಿಎಆರ್‌ ಮೈದಾನದಲ್ಲಿ ಸೇರಿದ್ದ ಪೊಲೀಸರು
ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಜನಜಾಗೃತಿ ಸಮಾವೇಶದ ಬಂದೋಬಸ್ತ್‌ಗೆ ಶುಕ್ರವಾರ ಸಿಎಆರ್‌ ಮೈದಾನದಲ್ಲಿ ಸೇರಿದ್ದ ಪೊಲೀಸರು   

ಹುಬ್ಬಳ್ಳಿ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಬಗ್ಗೆ ಜನಜಾಗೃತಿ ಮೂಡಿಸಲು ಶನಿವಾರ ಬಿಜೆಪಿ ಹಮ್ಮಿಕೊಂಡಿರುವ ಸಮಾವೇಶಕ್ಕೆ ಹುಬ್ಬಳ್ಳಿ ಸಜ್ಜುಗೊಂಡಿದೆ. ನೆಹರೂ ಮೈದಾನದಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸಿಎಎ ಕುರಿತು ಮಾತನಾಡಲಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸುರೇಶ ಅಂಗಡಿ, ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿದಂತೆ ಧಾರವಾಡ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಬಿಜೆಪಿ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದಾಜು 50 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಚನ್ನಮ್ಮ ವೃತ್ತ ಸೇರಿದಂತೆ ವಿವಿಧೆಡೆ ಬಿಜೆಪಿ ಧ್ವಜಗಳು ಹಾರಾಡುತ್ತಿವೆ.

ಸರ್ಪಗಾವಲು:ಸಮಾವೇಶ ನಡೆಯುವ ಮೈದಾನ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಭದ್ರತೆಗಾಗಿ ಮೂರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ADVERTISEMENT

ಮೈದಾನದ ಸುತ್ತಲಿನ ಕಟ್ಟಡಗಳ ಮೇಲೂ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಶುಕ್ರವಾರ ರಾತ್ರಿಯವರೆಗೂ ರಾಜ್ಯ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮರಕುಮಾರ್‌ ಪಾಂಡೆ ಮತ್ತು ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

ನಗರದ ಪ್ರಮುಖ ವೃತ್ತಗಳು ಬಸ್‌, ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ನೆಹರೂ ಮೈದಾನ ಮತ್ತು ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಮಾವೇಶಕ್ಕೆ ಹಾಕಲಾಗಿರುವ ವೇದಿಕೆ ಬಗ್ಗೆ ಅಮರಕುಮಾರ ಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.

‘ವೇದಿಕೆಗೆ ಗಟ್ಟಿಮುಟ್ಟಾದ ನೆಲಹಾಸಿನ ವ್ಯವಸ್ಥೆ ಮಾಡಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಬಂದಾಗ ಮಾಡಲಾಗಿದ್ದ ರೀತಿಯಲ್ಲಿಯೇ ಇಲ್ಲಿಯೂ ವ್ಯವಸ್ಥೆ ಮಾಡಬೇಕಿತ್ತು’ ಎಂದು ವೇದಿಕೆ ನಿರ್ಮಿಸಿದವರಿಗೆ ಹೇಳಿದರು. ಪಕ್ಕದಲ್ಲಿಯೇ ಇದ್ದ ದಿಲೀಪ್ ಅವರನ್ನು ಕರೆದು ‘ಭದ್ರತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸೂಚಿಸಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಪಾಂಡೆ ‘ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೈದಾನದ ಸುತ್ತಲೂ ಇರುವ ಕಟ್ಟಡಗಳಲ್ಲಿ ಹೋಗಿ ಬರುವ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಎಲ್ಲ ಕಟ್ಟಡಗಳ ಮೇಲೂ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದರು.

ವ್ಯಾಪಕ ಪ್ರಚಾರ: ಸಮಾವೇಶದ ಬಗ್ಗೆ ವ್ಯಾಪಕ ಪ್ರಚಾರ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರು ನಗರದ ಹೃದಯ ಭಾಗವಾದ ಚನ್ನಮ್ಮ ವೃತ್ತವನ್ನು ಬಿಜೆಪಿ ಮಯ ಮಾಡಿದ್ದಾರೆ. ವೃತ್ತದ ಸುತ್ತಲೂ ಮತ್ತು ವಿಮಾನ ನಿಲ್ದಾಣಕ್ಕೆ ತೆರಳುವ ಗೋಕುಲ ರಸ್ತೆಯಲ್ಲಿ ಬಿಜೆಪಿ ಬಾವುಟ ರಾರಾಜಿಸುತ್ತಿವೆ.

ಮೈದಾನದ ಮುಖ್ಯ ದ್ವಾರ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ‌ಯ ಭಾಗದಿಂದ ಮೈದಾನ ಪ್ರವೇಶಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಮೈದಾನದ ನಿರ್ವಹಣಾ ಕಟ್ಟಡದ ಹಿಂಭಾಗದಲ್ಲಿರುವ ಪ್ರವೇಶ ದ್ವಾರವನ್ನು ಗಣ್ಯ ವ್ಯಕ್ತಿಗಳಿಗೆ ಮಾತ್ರ ಮೀಸಲಿಡಲಾಗಿದೆ. ವೇದಿಕೆಯ ಹಿಂಭಾಗದಲ್ಲಿರುವ ಪ್ರವೇಶ ದ್ವಾರವನ್ನು ತುರ್ತು ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ.

ಶಾ ಭೇಟಿಗೆ ಮಹದಾಯಿ ಹೋರಾಟಗಾರರ ನಿರ್ಧಾರ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ, ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಇತ್ಯರ್ಥ ಪಡಿಸುವಂತೆ ಮನವಿ ಸಲ್ಲಿಸಲು ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ನಿರ್ಧರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಶಾ ಭೇಟಿಗೆ ಅವಕಾಶ ಮಾಡಿಕೊಡುವಂತೆ ಪೊಲೀಸ್‌ ಕಮಿಷನರ್‌, ಜಿಲ್ಲಾಧಿಕಾರಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಮಾಡಲಾಗಿದೆ ಎಂದರು.

ಮಹದಾಯಿ ವಿವಾದವನ್ನು ಪ್ರಧಾನಿ ಮಧ್ಯಸ್ಥಿಕೆ ಮೂಲಕ ಬಗೆಹರಿಸುವಂತೆ ಶಾ ಅವರ ಗಮನಕ್ಕೆ ತರಲಾಗುವುದು. ಭೇಟಿ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯಲ್ಲೂ ಮುಜುಗರವಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಶಾ ಅವರನ್ನು ಭೇಟಿ ಮಾಡಿ ಮಹದಾಯಿ ವಿವಾದ ಕುರಿತು ಗಮನ ಸೆಳೆಯಲು ಇದೊಂದು ಉತ್ತಮ ಅವಕಾಶ ಎಂದು ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಪದಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಭೇಟಿ ಮಾಡುವುದು ಅಷ್ಟು ಸೂಕ್ತವಲ್ಲ ಎಂದು ಸಚಿವ ಜೋಶಿ ಹೇಳಿದ್ದಾರೆ ಎಂದರು.

ಮುಖಂಡರಾದ ಎನ್‌.ಎಚ್‌. ಕೋನರಡ್ಡಿ, ವಿಕಾಸ ಸೊಪ್ಪಿನ, ಮಹೇಶ ಪತ್ತಾರ, ಲೋಕನಾಥ ಹೆಬಸೂರ, ಸಿದ್ದು ತೇಜಿ, ಅಮೃತ್‌ ಇಜಾರಿ, ಬಾಬಾಜಾನ್ ಮುಧೋಳ, ಟಿ.ಎಂ. ಶೆಲವಡಿ ಇದ್ದರು.

ಅಪಪ್ರಚಾರಕ್ಕೆ ಸಮಾವೇಶದ ಮೂಲಕವೇ ಉತ್ತರ: ಶೆಟ್ಟರ್

ಹುಬ್ಬಳ್ಳಿ: ಸಿಎಎ ಜಾರಿಯಾದರೆ ಮುಸ್ಲಿಮರನ್ನು ದೇಶ ಬಿಟ್ಟು ಕಳುಹಿಸುತ್ತಾರೆ ಎಂದು ಕಾಂಗ್ರೆಸ್ ಮಾಡುತ್ತಿರುವ ಅಪಪ್ರಚಾರಕ್ಕೆ ಶನಿವಾರ ಅಮಿತ್‌ ಶಾ, ಸಮಾವೇಶದ ಮೂಲಕ ಉತ್ತರ ನೀಡಲಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಶುಕ್ರವಾರ ಸಂಜೆ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ನಿರುದ್ಯೋಗಿಗಳಾಗಿರುವ ಕಾಂಗ್ರೆಸ್‌ನವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿ ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣರಾಗಿದ್ದಾರೆ’ ಎಂದು ಟೀಕಿಸಿದರು.

‘ಸಮಾವೇಶದಲ್ಲಿ ಪಾಲ್ಗೊಳ್ಳಲು ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಿಂದ ಜನ ಬರಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಶಾ ಅವರೊಂದಿಗೆ ಚರ್ಚಿಸುವ ಬಗ್ಗೆ ಖಚಿತವಾಗಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಪ್ಪು ಬಟ್ಟೆ ಧರಿಸಿದರೆ ಪ್ರವೇಶ ನಿಷೇಧ

ಸಮಾವೇಶ ನೋಡಲು ಮೈದಾನಕ್ಕೆ ಬರುವ ಜನ ಕಪ್ಪು ಪಟ್ಟಿ ಹಾಗೂ ಕಪ್ಪು ಬಟ್ಟೆಗಳನ್ನು ಧರಿಸುವಂತಿಲ್ಲ. ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಒಳಗೆ ತರುವಂತಿಲ್ಲ ಎಂದು ಹುಬ್ಬಳ್ಳಿ– ಧಾರವಾಡ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್ ತಿಳಿಸಿದರು.

ಕಾಂಗ್ರೆಸ್‌ನಿಂದ ‘ಗೋ ಬ್ಯಾಕ್‌ ಶಾ’ ಪ್ರತಿಭಟನೆ

ಸಿಎಎ ಮತ್ತು ಅಮಿತ್‌ ಶಾ ನಗರಕ್ಕೆ ಬರುವುದನ್ನು ವಿರೋಧಿಸಿ ಕಾಂಗ್ರೆಸ್‌ ಶನಿವಾರ ಮಧ್ಯಾಹ್ನ 3 ಗಂಟೆಗೆ ನಗರದ ಚನ್ನಮ್ಮ ವೃತ್ತದಲ್ಲಿ ‘ಗೋ ಬ್ಯಾಕ್‌ ಶಾ’ ಪ್ರತಿಭಟನೆ ಹಮ್ಮಿಕೊಂಡಿದೆ.

ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ವಿವಿಧ ದಲಿತ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.