ADVERTISEMENT

ಕೋವಿಡ್: ಹೊಸ ತಳಿ ಪತ್ತೆಗೆ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 15:51 IST
Last Updated 16 ಜೂನ್ 2022, 15:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ಹೊಸ ತಳಿ ಪತ್ತೆಗಾಗಿ, ವಿಮಾನ ನಿಲ್ದಾಣದಲ್ಲಿ ಸೋಂಕು ದೃಢಪಟ್ಟವರ ಮಾದರಿಗಳನ್ನು ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ (ಜಿನೋಮಿಕ್ ಸಿಕ್ವೆನ್ಸೀಸ್‌) ಪರೀಕ್ಷೆಗೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಇಲಾಖೆಯ ಆಯುಕ್ತ ಡಿ. ರಂದೀಪ್ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದಾರೆ. ‘ಕೋವಿಡ್ ಮೂರನೇ ಅಲೆಯ ಅವಧಿಯಲ್ಲಿ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳಿಂದ ರೋಗದ ತೀವ್ರತೆ ಹೆಚ್ಚದಂತೆ ತಡೆಯಲು ಸಾಧ್ಯವಾಯಿತು. ಈಗ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ವೈರಾಣುವಿನ ರೂಪಾಂತರಿ ಪತ್ತೆ ಹಚ್ಚಿ, ಅದರ ಸ್ವರೂಪ ಹಾಗೂ ಪರಿಣಾಮದ ಬಗ್ಗೆ ಅಧ್ಯಯನ ನಡೆಸಿ, ನಿಗಾ ಇಡಬೇಕಾಗುತ್ತದೆ. ಆದ್ದರಿಂದವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ ಪರೀಕ್ಷೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದ್ದಾರೆ.

‘ವಿಮಾನ ನಿಲ್ದಾಣಗಳಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇರಿಸಬೇಕು.ಹೊಸ ತಳಿ ಪತ್ತೆಗಾಗಿ ವಿದೇಶಗಳಿಂದ ಬರುವ ಶೇ 2 ರಷ್ಟು ಪ್ರಯಾಣಿಕರನ್ನು ಸಾಮೂಹಿಕ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು.ವರದಿಯಲ್ಲಿ ಸೋಂಕು ದೃಢಪಟ್ಟರೆ, ಆ ಮಾದರಿಯನ್ನುವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ ಪರೀಕ್ಷೆಗೆ ಕಳುಹಿಸಬೇಕು’ ಎಂದು ಸೂಚಿಸಿದ್ದಾರೆ.

ADVERTISEMENT

‘ಶೀತಜ್ವರ ಮಾದರಿ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಸಮಸ್ಯೆ ಇರುವವರ ಮೇಲೆ ನಿಗಾ ಇರಿಸಬೇಕು.ಈ ಲಕ್ಷಣಗಳನ್ನು ಹೊಂದಿರುವ ಪ್ರತಿ 20 ಪ್ರಕರಣಗಳಲ್ಲಿ ಒಬ್ಬರ ಮಾದರಿಯನ್ನು ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.