ADVERTISEMENT

ಕೋವಿಡ್‌: ಮೂರು ತಿಂಗಳು ಸವಾಲು

ಸೋಂಕು ನಿಯಂತ್ರಣ ಕ್ರಮ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 21:22 IST
Last Updated 19 ಅಕ್ಟೋಬರ್ 2020, 21:22 IST
ಡಾ.ಕೆ.ಸುಧಾಕರ್‌ 
ಡಾ.ಕೆ.ಸುಧಾಕರ್‌    

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣದ ದೃಷ್ಟಿಯಿಂದ ಮುಂದಿನ ಮೂರು ತಿಂಗಳು ಮಹತ್ವದ ಕಾಲಘಟ್ಟ. ಚಳಿಗಾಲದ ಜತೆ ಸಾಲು ಸಾಲು ಹಬ್ಬಗಳೂ ಬರುತ್ತಿದ್ದು, ಜನರು ತೀವ್ರ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಕೋವಿಡ್‌ ನಿಯಂತ್ರಣ ಕುರಿತು ಸೋಮವಾರ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಜತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಳಿಗಾಲ ಮತ್ತು ಹಬ್ಬದ ಸಂದರ್ಭಗಳಲ್ಲಿ ಸೋಂಕು ವ್ಯಾಪಕವಾಗಿ ಹಬ್ಬುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೇರಳದಲ್ಲಿ ಓಣಂ ಹಬ್ಬ ಆಚರಣೆ ವೇಳೆ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಸೋಂಕು ಭಾರಿ ಪ್ರಮಾಣದಲ್ಲಿ ಹಬ್ಬಿದೆ. ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಉದ್ಭವವಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದರು.

ಬೇಗ ಪರೀಕ್ಷೆ ಮಾಡುವುದು ಮತ್ತು ಸೋಂಕಿನ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ ಸಾವಿನ ಪ್ರಮಾಣ ತಗ್ಗಿಸಲು ಸಾಧ್ಯವಿದೆ. ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಸಾವಿನ ಪ್ರಮಾಣ ಶೇ 1.37ರಷ್ಟಿದೆ. ಅದನ್ನು ಶೇ 1ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಶೇ 1.14ರಷ್ಟಿದ್ದು, ಶೀಘ್ರದಲ್ಲಿಯೇ ಶೇ 1ಕ್ಕಿಂತ ಕೆಳಕ್ಕೆ ಬರುವ ವಿಶ್ವಾಸವಿದೆ ಎಂದು ಹೇಳಿದರು.

ADVERTISEMENT

ಪರೀಕ್ಷೆ ಪ್ರಮಾಣ ಹೆಚ್ಚಳ: ‘ಬೆಂಗಳೂರಿನಲ್ಲಿ ಸೆಪ್ಟೆಂಬರ್‌ 19ರವರೆಗೆ ಬೆಂಗಳೂರಿನಲ್ಲಿ 13.20 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು. ನಂತರದ ಒಂದು ತಿಂಗಳಲ್ಲಿ 22.90 ಲಕ್ಷ ಮಾದರಿಗಳ ಪರೀಕ್ಷೆ ನಡೆದಿದೆ. ಪರೀಕ್ಷೆಯ ಪ್ರಮಾಣದಲ್ಲಿ ಶೇ 73ರಷ್ಟು ಹೆಚ್ಚಳವಾಗಿದೆ. ಮುಂಬೈ, ಚೆನ್ನೈ, ಅಹಮದಾಬಾದ್‌, ದೆಹಲಿ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಕೋವಿಡ್‌ ಪರೀಕ್ಷೆಯಲ್ಲಿ ಮುಂಚೂಣಿಯಲ್ಲಿದೆ. ಇತರ ನಗರಗಳಲ್ಲಿ ಪರೀಕ್ಷೆಯ ಪ್ರಮಾಣ ಹೆಚ್ಚಳದ ಸರಾಸರಿ ಶೇ 49ರಷ್ಟಿದೆ’ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಪರೀಕ್ಷೆಯ ಪ್ರಮಾಣ ಹೆಚ್ಚಿಸಿರುವುದರಿಂದ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಕಡಿಮೆ ಸೋಂಕಿತರ ಸಂಖ್ಯೆಯನ್ನು ತೋರಿಸುವ ದುರುದ್ದೇಶದಿಂದ ಪರೀಕ್ಷೆಯನ್ನೇ ಕಡಿಮೆ ಮಾಡಲು ಆಗದು ಎಂದರು.

ಕಠಿಣ ಕ್ರಮದ ಎಚ್ಚರಿಕೆ: ಕೆಲವು ಆಸ್ಪತ್ರೆಗಳು ದಲ್ಲಾಳಿಗಳ ಮೂಲಕ ಹಾಸಿಗೆಗಳನ್ನು ಹಂಚಿಕೆ ಮಾಡುತ್ತಿರುವ ದೂರುಗಳಿವೆ. ಈ ರೀತಿಯ ತಪ್ಪು ಮಾಡುವ ಆಸ್ಪತ್ರೆಗಳು ಮತ್ತು ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಚ್ಚರಿಕೆ ನೀಡಿದರು.

ನಿರ್ಬಂಧಕ್ಕೆ ಚಿಂತನೆ

ದಸರಾ ಪ್ರಯುಕ್ತ ಮೈಸೂರು ನಗರದ ವಿವಿಧ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗಿದೆ. ಅದನ್ನು ವೀಕ್ಷಿಸಲು ಹೆಚ್ಚಿನ ಜನರು ಬರುತ್ತಿದ್ದಾರೆ. ಪರಿಸ್ಥಿತಿ ಮೇಲೆ ನಿಗಾ ಇಡುವಂತೆ ಸಿಎಂ ಸೂಚಿಸಿದ್ದಾರೆ. ಹೆಚ್ಚಿನ ಜನರು ಬರುವುದು ಮುಂದುವರಿದರೆ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ, ನಿರ್ಬಂಧ ಹೇರಲಾಗುವುದು ಎಂದು ಡಾ.ಕೆ. ಸುಧಾಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.