ADVERTISEMENT

ಕೋವಿಡ್‌ ಭ್ರಷ್ಟಾಚಾರ: ಉನ್ನತ ತನಿಖೆಗೆ ಶಿಫಾರಸು

ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ದಾಖಲೆ ಒದಗಿಸದ ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 20:06 IST
Last Updated 17 ಜುಲೈ 2023, 20:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ನಿಯಂತ್ರಣದ ಹೆಸರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ, ದುರಾಡಳಿತ ಮತ್ತು ಅಕ್ರಮಗಳ ಕುರಿತು ಪ್ರತಿಷ್ಠಿತ ಸ್ವಾಯತ್ತ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಶಿಫಾರಸು ಮಾಡಿದೆ.

2020–21ನೇ ಸಾಲಿನಲ್ಲಿ ಪಿಎಸಿ ಅಧ್ಯಕ್ಷರಾಗಿದ್ದ ಈಗಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಅನುಮೋದಿಸಿದ್ದ ವರದಿಯನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಔಷಧ, ವೈದ್ಯಕೀಯ ಸಾಧನಗಳ ಖರೀದಿ, ಬಳಕೆ, ಕೋವಿಡ್‌ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆ, ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ಶುಲ್ಕ ಪಾವತಿ ಸೇರಿದಂತೆ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಆರೋಗ್ಯ ಇಲಾಖೆಯು ಸಮಿತಿಯೊಂದಿಗೆ ಹಂಚಿಕೊಂಡಿಲ್ಲ ಎಂದು ಪಿಎಸಿ ದೂರಿದೆ.

‘ಕೋವಿಡ್‌ ನಿಯಂತ್ರಣದಲ್ಲಿ ರಾಜ್ಯ ಸರ್ಕಾರವು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹೇಳಿದೆ. ಸಮಿತಿಯ ಹಿಂದಿನ ಅಧ್ಯಕ್ಷರಾಗಿದ್ದ ಎಚ್‌.ಕೆ. ಪಾಟೀಲ ನೇತೃತ್ವದಲ್ಲಿ ಸಲ್ಲಿಸಿದ್ದ ವರದಿಯನ್ನು ಹಿಂದಿನ ಸಭಾಧ್ಯಕ್ಷರು ಅನುಮೋದಿಸಿರಲಿಲ್ಲ ಎಂಬ ಉಲ್ಲೇಖವೂ ವರದಿಯುಲ್ಲಿದೆ.

ADVERTISEMENT

ಕೋವಿಡ್‌ ನಿಯಂತ್ರಣದ ಭಾಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ಔಷಧಿ, ವೈದ್ಯಕೀಯ ಉಪಕರಣ ಖರೀದಿಸಿರುವ ಕುರಿತು ಮಹಾಲೇಖಪಾಲರಿಂದ ‘ವಿಶೇಷ ಲೆಕ್ಕಪರಿಶೋಧನೆ’ ನಡೆಸಲು ನಿರ್ಧರಿಸಲಾಗಿತ್ತು. ಈ ಸಂಬಂಧ ಮಹಾಲೇಖಪಾಲರಿಗೆ ಸಮಿತಿಯು ಪತ್ರವನ್ನೂ ಬರೆದಿತ್ತು. ಆದರೆ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವ್ಯತಿರಿಕ್ತ ಸ್ಪಷ್ಟನೆ ನೀಡಿದ್ದರು. ಇದರಿಂದ ವಿಶೇಷ ಲೆಕ್ಕಪರಿಶೋಧನೆ ಪ್ರಸ್ತಾವವನ್ನು ಮಹಾಲೇಖಪಾಲರು ಕೈಬಿಟ್ಟಿದ್ದರು ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.