ADVERTISEMENT

ಕೋವಿಡ್: ರಾಜ್ಯದಲ್ಲಿ ದೈನಂದಿನ ಪರೀಕ್ಷೆ 80 ಸಾವಿರಕ್ಕೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 16:09 IST
Last Updated 28 ನವೆಂಬರ್ 2021, 16:09 IST
   

ಬೆಂಗಳೂರು: ಕೆಲವು ಜಿಲ್ಲೆಗಳಲ್ಲಿ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ದೈನಂದಿನ ಕೋವಿಡ್ ಪರೀಕ್ಷೆಗಳ ಗುರಿಯನ್ನು 60 ಸಾವಿರದಿಂದ 80 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ.

ಈ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗ ನಡೆಸಲಾಗುತ್ತಿರುವ 25 ಸಾವಿರ ಪರೀಕ್ಷೆಗಳ ಸಂಖ್ಯೆಯನ್ನು 30 ಸಾವಿರಕ್ಕೆ ಏರಿಸಬೇಕು. ಉಳಿದ ಎಲ್ಲ ಜಿಲ್ಲೆಗಳಿಂದ ನಡೆಸಲಾಗುತ್ತಿದ್ದ 35 ಸಾವಿರ ಪರೀಕ್ಷೆಗಳ ಸಂಖ್ಯೆಯನ್ನು 50 ಸಾವಿರಕ್ಕೆ ಹೆಚ್ಚಳ ಮಾಡಬೇಕು. ನಿಗದಿತ ಗುರಿಯಲ್ಲಿ ಶೇ 50 ರಷ್ಟು ಪರೀಕ್ಷೆಗಳನ್ನು ಜಿಲ್ಲಾ ಕೇಂದ್ರದಲ್ಲಿಯೇ ನಡೆಸಬೇಕು’ ಎಂದು ತಿಳಿಸಿದ್ದಾರೆ.

‘ಒಟ್ಟು ಪರೀಕ್ಷೆಗಳಲ್ಲಿ ಶೇ 10ರಷ್ಟು ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಗೆ ಮಾಡಬೇಕು. ಶಾಲೆಗಳ ವಿದ್ಯಾರ್ಥಿಗಳ ಪೈಕಿ ಶೇ 5 ರಷ್ಟು ವಿದ್ಯಾರ್ಥಿಗಳಾದರೂ ಪ್ರತಿ ವಾರ ಕೋವಿಡ್ ಪರೀಕ್ಷೆಗೆ ಒಳಪಡಬೇಕು’ ಎಂದು ಸೂಚಿಸಿದ್ದಾರೆ.

ADVERTISEMENT

‘ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಹಾಗೂ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಎದುರಿಸುತ್ತಿರುವವರನ್ನು ಗುರುತಿಸಿ, ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಶಾಲಾ– ಕಾಲೇಜು, ಹೋಟೆಲ್‌, ಕಂಪನಿ, ಮಾಲ್‌ ಸೇರಿದಂತೆ ವಿವಿಧೆಡೆ ಸಾಮೂಹಿಕ ಕೋವಿಡ್ ಪರೀಕ್ಷೆ ನಡೆಸಬೇಕು’ ಎಂದು ಸುತ್ತೋಲೆಯಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.