ADVERTISEMENT

ಎಚ್‌ಡಿಕೆಗೆ ಮತ್ತೆ ಸಿಎಂ ಕನಸು: ಸಿ.ಟಿ.ರವಿ ಲೇವಡಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 19:02 IST
Last Updated 29 ನವೆಂಬರ್ 2019, 19:02 IST

ಬೆಂಗಳೂರು: ‘ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಪುನಃ ಕಾಂಗ್ರೆಸ್‌ ಜತೆ ಸೇರಿ ಅಧಿಕಾರ ಹಿಡಿಯುವ ಹಗಲು ಕನಸು ಕಾಣುತ್ತಿದ್ದಾರೆ. ಅವರ ಕನಸು ಖಂಡಿತಾ ಈಡೇರುವುದಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

‘ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪೂರ್ಣ ಬಹುಮತದೊಂದಿಗೆ ಮೂರೂವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಡಿ. 9 ರ ಬಳಿಕ ಅವಕಾಶವಾದಿ ಕೂಟ ರಚಿಸುವ ಬಗ್ಗೆ ಗೌಡರು ಹಗಲುಗನಸು ಕಾಣುತ್ತಿದ್ದಾರೆ. ಇನ್ನೊಂದೆಡೆ ಮಧ್ಯಂತರ ಚುನಾವಣೆಯ ಬಗ್ಗೆ ಸಿದ್ದರಾಮಯ್ಯ ಕನವರಿಸುತ್ತಿದ್ದಾರೆ. ಇಬ್ಬರ ಬಯಕೆಯೂ ಈಡೇರುವುದಿಲ್ಲ. ಎಚ್‌.ಡಿ.ಕುಮಾರಸ್ವಾಮಿಯವರ ಗ್ಲಿಸರಿನ್‌ ಕಣ್ಣೀರಿಗೆ ಜನ ಮರುಳಾಗುವುದೂ ಇಲ್ಲ’ ಎಂದು ರವಿ ಲೇವಡಿ ಮಾಡಿದರು.

ADVERTISEMENT

‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ತಾಜ್‌ ವೆಸ್ಟ್‌ ಎಂಡ್‌ ಪಂಚತಾರಾ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದರು. ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುವುದು ಪೂರ್ವ ಜನ್ಮದ ಪುಣ್ಯ ಎಂದು ಜನಪ್ರತಿನಿಧಿಗಳು ಭಾವಿಸುತ್ತಾರೆ. ಪಂಚತಾರಾ ಹೋಟೆಲ್‌ನಲ್ಲಿ ಡೀಲಿಂಗ್‌ ಅಲ್ಲದೆ ಇನ್ನೇನು ಮಾಡಿರಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಬಿಜೆಪಿಯಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಬಗ್ಗೆ ಕೆಲ ಸಾಹಿತಿಗಳು ಅನೈತಿಕ, ವ್ಯಭಿಚಾರ, ದ್ರೋಹಿ ಇತ್ಯಾದಿ ಪದಗಳನ್ನು ಬಳಸಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಶಾಸಕರಿಂದ ಅಡ್ಡ ಮತದಾನ ಮಾಡಿಸಿದ್ದು ರಾಜಕೀಯ ವ್ಯಭಿಚಾರವಲ್ಲವೆ? ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಕೆಸಿಪಿ ಶಾಸಕರನ್ನು ಆಪೋಶನ ತೆಗೆದುಕೊಂಡಿದ್ದು ಸದಾಚಾರವೆ? ಈ ಸಾಹಿತಿಗಳು ಕಾಂಗ್ರೆಸ್‌– ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡವರು ಮತ್ತು ಅವರಿಗೆ ಸ್ನೇಹಿತರು. ಆದ್ದರಿಂದ ಆ ಪಕ್ಷಗಳ ಅಕ್ರಮಗಳ ಬಗ್ಗೆ ಬಾಯಿ ಬಿಡುವುದಿಲ್ಲ’ ಎಂದು ಸಾಹಿತಿ ದೇವನೂರ ಮಹಾದೇವ ಅವರಿಗೆ ತಿರುಗೇಟು ನೀಡಿದರು.

‘ಅನರ್ಹ ಶಾಸಕರು ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಬೇಸತ್ತು ಬಹಿರಂಗವಾಗಿ ರಾಜೀನಾಮೆ ನೀಡಿ ರಾಜಮಾರ್ಗದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಇವರಲ್ಲಿ ಕೆಲವರು ಮಂತ್ರಿ ಸ್ಥಾನವನ್ನು ತೊರೆದು ಬಂದಿದ್ದಾರೆ’ ಎಂದರು.

‘ಸಭ್ಯತೆಯ ಮುಖವಾಡ ತೊಟ್ಟು ಮಾತನಾಡುವ ಶಾಸಕ ರಮೇಶ್‌ಕುಮಾರ್‌ ಅವರ ಸಭ್ಯತೆ ಬಗ್ಗೆ ನಾನು ಮಾತನಾಡುವುದಿಲ್ಲ. ಅದನ್ನು ಅವರ ಪಕ್ಷದವರೇ ಆದ ಕೆ.ಎಚ್‌.ಮುನಿಯಪ್ಪ ಅವರೇ ಹೇಳುತ್ತಾರೆ. ಪಕ್ಷದೊಳಗಿದ್ದುಕೊಂಡೇ, ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ದ್ರೋಹ ಎಸಗುವುದು ವ್ಯಭಿಚಾರವಲ್ಲವೆ’ ಎಂದು ರವಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.