ಬೆಂಗಳೂರು: ಹಿಂದುಳಿದ ವರ್ಗಗಳ ಮತ್ತು ದಲಿತ ಸಮುದಾಯಗಳ ಅರ್ಚಕರಿಗೆ ಪ್ರಗತಿಪರ ಚಿಂತನೆ ಪರಿಚಯಿಸಲು ಅನುಕೂಲವಾಗುವಂತೆ ಗುರುಕುಲ ಆರಂಭಿಸಲು ಚಿತ್ರದುರ್ಗದಲ್ಲಿ ಜಾಗ ಗುರುತಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಹಿಂದುಳಿದ ಮತ್ತು ದಲಿತ ಮಠಾಧೀಶ್ವರರ ಒಕ್ಕೂಟದ ನಿಯೋಗವು ಶನಿವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ‘ತಳ ಸಮುದಾಯಗಳ ದೇವಸ್ಥಾನಗಳ ಅರ್ಚಕರಿಗೆ ಬುದ್ಧ, ಬಸವ, ಅಂಬೇಡ್ಕರ್, ಕನಕ, ವಾಲ್ಮೀಕಿ, ನಾರಾಯಣಗುರು ಮತ್ತು ಜ್ಯೋತಿ ಭಾ ಪುಲೆ ಅವರ ವಿಚಾರಗಳನ್ನು ಪರಿಚಯಿಸಬೇಕಿದೆ. ಇದಕ್ಕಾಗಿ ಗುರುಕುಲ ಒಂದನ್ನು ಸ್ಥಾಪಿಸಬೇಕಿದ್ದು, ಚಿತ್ರದುರ್ಗದಲ್ಲಿ ಅಗತ್ಯ ಜಾಗ ಒದಗಿಸಿ’ ಎಂದು ಮನವಿ ಮಾಡಿದರು.
‘ಈ ಗುರುಕುಲದಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ತರಬೇತಿ ನೀಡುವ ಉದ್ದೇಶವಿದೆ. ಒಟ್ಟು ₹ 25 ಕೋಟಿ ವೆಚ್ಚದಲ್ಲಿ ಗುರುಕುಲ ನಿರ್ಮಾಣಕ್ಕೆ ಯೋಜಿಸಿದ್ದೇವೆ. ಅಗತ್ಯ ಹಣಕಾಸು ನೆರವನ್ನೂ ಒದಗಿಸಬೇಕು. ತಳ ಸಮುದಾಯದ ಮಠಗಳಿಗೆ ತಲಾ ₹10 ಕೋಟಿ ಅನುದಾನ ಒದಗಿಸಬೇಕು’ ಎಂದು ಕೋರಿದರು.
ನಿಯೋಗದ ಜತೆಗೆ ಸಭೆ ನಡೆಸಿದ ಸಿದ್ದರಾಮಯ್ಯ ಅವರು, ‘ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.
ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಸಿದ್ದರಾಮೇಶ್ವರ ಮಹಾಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ, ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನಿಯೋಗದಲ್ಲಿ ಇದ್ದರು.
ನಿಯೋಗದ ಭೇಟಿಯ ನಂತರ ಭಗೀರಥ ಉಪ್ಪಾರ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರು ಸಮುದಾಯದ ಮುಖಂಡರ ಜತೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದರು. ‘ರಾಜಕೀಯದಲ್ಲಿ ಸಮುದಾಯದ ಪ್ರಾತಿನಿಧ್ಯವೇ ಇಲ್ಲ. ಈ ಕೊರತೆಯನ್ನು ನಿವಾರಿಸಬೇಕು’ ಎಂದು ಕೋರಿದರು. ‘ಪರಿಶೀಲನೆ ನಡೆಸಿ, ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.