ADVERTISEMENT

ಧವಳಗಿರಿ ಮುಂದೆ ಸಂಭ್ರಮ, ಸಡಗರ

ದೇವಾಲಯದಲ್ಲಿ ಪೂಜೆ, ಯತಿಗಳ ಕಾಲಿಗೆರಗಿದ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 19:51 IST
Last Updated 26 ಜುಲೈ 2019, 19:51 IST
ಬೆಂಗಳೂರಿನ ಡಾಲರ್ಸ್‌ ಕಾಲೊನಿಯಲ್ಲಿ ಶುಕ್ರವಾರ ಅಭಿಮಾನಿಗಳು ಬಿ.ಎಸ್‌.ಯಡಿಯೂರಪ್ಪ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು.  ಪ್ರಜಾವಾಣಿ ಚಿತ್ರ
ಬೆಂಗಳೂರಿನ ಡಾಲರ್ಸ್‌ ಕಾಲೊನಿಯಲ್ಲಿ ಶುಕ್ರವಾರ ಅಭಿಮಾನಿಗಳು ಬಿ.ಎಸ್‌.ಯಡಿಯೂರಪ್ಪ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು.  ಪ್ರಜಾವಾಣಿ ಚಿತ್ರ   

ಬೆಂಗಳೂರು: ಡಾಲರ್ಸ್‌ ಕಾಲೊನಿಯ ‘ಧವಳಗಿರಿ’ ಶುಕ್ರವಾರ ಬೆಳಗ್ಗಿನಿಂದಲೂ ಸಂಭ್ರಮ, ಸಡಗರ ಮತ್ತು ಚಟುವಟಿಕೆಯ ಕೇಂದ್ರವಾಗಿತ್ತು.

ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅಧಿಕಾರ ಸ್ವೀಕರಿಸಲು ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯು ಹೊರ ಬೀಳುತ್ತಿದ್ದಂತೆ ‘ಧವಳಗಿರಿ’ ನಿವಾಸದ ಮುಂದೆ ಬಿಜೆಪಿಯ ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದರು.

ಯಡಿಯೂರಪ್ಪ ಅವರಿಗೆ ಜೈಕಾರ ಹಾಕಿದ ಅಭಿಮಾನಿಗಳು ನರ್ತನ ಮಾಡಿದರು. ಚೆಂಡೆ ಮತ್ತು ಇತರ ವಾದ್ಯಗಳೂ ಮೊಳಗಿದವು. ಕಾರ್ಯಕರ್ತರು ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಕೆಲವು ಕಾರ್ಯಕರ್ತರು ಬಿಎಸ್‌ವೈ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಇದೇ ವಾತಾವರಣ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯ ಮುಂದೆಯೂ ಇತ್ತು. ಇಲ್ಲಿಯೂ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ADVERTISEMENT

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಂದ ಸರ್ಕಾರ ರಚನೆಗೆ ಹಸಿರು ನಿಶಾನೆ ಸಿಗುತ್ತಿದ್ದಂತೆ, ಯಡಿಯೂರಪ್ಪ ಅವರುಸರ್ಕಾರ ರಚನೆಯ ಹಕ್ಕು ಮಂಡಿಸಲು ಬೆಳಿಗ್ಗೆ 10 ಗಂಟೆಗೆ ರಾಜಭವನಕ್ಕೆ ತೆರಳಿದರು. ಅದಕ್ಕೆ ಮುನ್ನ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ರಾಜಭವನಕ್ಕೆ ತೆರಳುವಾಗ ಬಿಎಸ್‌ವೈ ಪುತ್ರ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಕೆ.ಜಿ.ಬೋಪಯ್ಯ, ಗೋವಿಂದ ಕಾರಜೋಳ, ರೇಣುಕಾಚಾರ್ಯ, ಎಸ್‌.ಆರ್‌.ವಿಶ್ವನಾಥ್‌, ಚಂದ್ರಪ್ಪ, ಸುನಿಲ್‌ ಕುಮಾರ್ ಜತೆಗಿದ್ದರು.

ಮನೆಯಿಂದ ರಾಜಭವನಕ್ಕೆ ಹೊರಟು ನಿಂತಾಗ ಕಾರಿನ ಚಾಲಕ ಇಲ್ಲದ್ದನ್ನು ಕಂಡು ಕಸಿವಿಸಿಗೊಂಡು ಗರಂ ಆದರು. ‘ಡ್ರೈವರ್‌ ಎಲ್ಲಿ ಹೋಗಿದ್ದಾನೆ’ ಎಂದು ಪ್ರಶ್ನಿಸಿದರು. ಮನೆಯೊಳಗೆ ಇದ್ದಾನೆ ಬರುತ್ತಾನೆ ಎಂದು ಸಮೀಪದಲ್ಲಿದ್ದವರು ಹೇಳಿದರು. ತಕ್ಷಣವೇ ಚಾಲಕನನ್ನು ಕರೆಸಲಾಯಿತು. ರಾಜಭವನಕ್ಕೆ ಹೋಗುವ ಧಾವಂತ ಅವರಲ್ಲಿ ಎದ್ದು ಕಾಣುತ್ತಿತ್ತು.

ರಾಜಭವನಕ್ಕೆ ತೆರಳುವ ದಾರಿ ಮಧ್ಯೆ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಸಿಕ್ಕಿದರು. ಕಾರಿನಿಂದ ಇಳಿದು ಅವರ ಆಶೀರ್ವಾದವನ್ನು ಪಡೆದರು.

ಸಂಜೆ ಮತ್ತೆ ‘ಧವಳಗಿರಿ’ ಮನೆಯಲ್ಲಿ ಸಂಭ್ರಮ ಕಳೆಕಟ್ಟಿತ್ತು. ಯಡಿಯೂರಪ್ಪ ಅವರು ತೆರಳುವ ದಾರಿಯಲ್ಲಿ ಕೇಸರಿ ಚೆಲ್ಲಿ ಪಟಾಕಿ ಸಿಡಿಸಲಾಯಿತು. ರಾಜಭವನಕ್ಕೆ ತೆರಳುವುದಕ್ಕೆ ಮೊದಲು ಮಲ್ಲೇಶ್ವರದ ಕಾಡಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಅವರು ಪಕ್ಷದ ಕಚೇರಿಗೆ ಬಂದಾಗ ಸಾವಿರಾರು ಜನ ಅಲ್ಲಿ ಸೇರಿದ್ದರು. ‘ಸೇಡಿನ ರಾಜಕಾರಣ ಮಾಡುವುದಿಲ್ಲ, ಜನರ ಆಶಯಕ್ಕೆ ತಕ್ಕಂತೆ ಕೆಲಸ ಮಾಡುವೆ, ಮೂರು ತಿಂಗಳಲ್ಲಿ ಬದಲಾವಣೆ ಗೊತ್ತಾಗಲಿದೆ’ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದ ಅವರು ಬಳಿಕ ರಾಜಭವನಕ್ಕೆ ತೆರಳಿದರು. ಹೋದಲ್ಲೆಲ್ಲ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.