ADVERTISEMENT

ನೇಮಕಾತಿ ಆದೇಶ ಪತ್ರ ತಡೆಗೆ ಆಕ್ಷೇಪ

ಖಾಸಗಿ ಅನುದಾನಿತ ಪ್ರಥಮದರ್ಜೆ ಕಾಲೇಜುಗಳಿಗೆ ಆಯ್ಕೆಗೊಂಡ ಅಭ್ಯರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 19:38 IST
Last Updated 23 ನವೆಂಬರ್ 2020, 19:38 IST
ನೇಮಕಾತಿ ಆದೇಶ ಪತ್ರ ನೀಡಬೇಕು ಎಂದು ಒತ್ತಾಯಿಸಿ ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕ ಹುದ್ದೆ ಆಕಾಂಕ್ಷಿತರು ಕಾಲೇಜು ಶಿಕ್ಷಣ ಇಲಾಖೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು
ನೇಮಕಾತಿ ಆದೇಶ ಪತ್ರ ನೀಡಬೇಕು ಎಂದು ಒತ್ತಾಯಿಸಿ ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕ ಹುದ್ದೆ ಆಕಾಂಕ್ಷಿತರು ಕಾಲೇಜು ಶಿಕ್ಷಣ ಇಲಾಖೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ಆರ್ಥಿಕ ಸಂಕಷ್ಟದ ಕಾರಣ ನೀಡಿ, ನೇಮಕಾತಿ ಆದೇಶ ನೀಡುವುದನ್ನು ತಡೆಹಿಡಿದಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಖಾಸಗಿ ಅನುದಾನಿತ ಪ್ರಥಮದರ್ಜೆ ಕಾಲೇಜುಗಳಿಗೆ ಆಯ್ಕೆಗೊಂಡ ಅಭ್ಯರ್ಥಿಗಳು ಕಾಲೇಜು ಶಿಕ್ಷಣ ಇಲಾಖೆಯ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

‘ರಾಜ್ಯದ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಮರಣ, ನಿವೃತ್ತಿ, ವರ್ಗಾವಣೆ ಹಾಗೂ ಇನ್ನಿತರೆ ಕಾರಣಗಳಿಂದ ತೆರವಾದ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. 2017ರ ಜೂನ್‌ ನಂತರ ಆಯಾ ಕಾಲೇಜುಗಳು ಪಡೆದ ಅನುಮತಿ ಆಧಾರದ ಮೇಲೆ ನೇಮಕಾತಿಗೆ ಅವಕಾಶ ನೀಡಲಾಯಿತು. ಅಂದರೆ, ಅಂದಿನಿಂದಲೇ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ, ಈಗ ನೇಮಕಾತಿ ಆದೇಶ ಪತ್ರ ನೀಡದೆ ಕೋವಿಡ್‌ ನೆಪ ಹೇಳಲಾಗುತ್ತಿದೆ’ ಎಂದು ಸಹಾಯಕ ಪ್ರಾಧ್ಯಾಪಕ ಹುದ್ದೆ ಆಕಾಂಕ್ಷಿಯೊಬ್ಬರು ಹೇಳಿದರು.

‘ಯುಜಿಸಿ ನಿಯಮಾನುಸಾರವಾಗಿ, ಸರ್ಕಾರದ ಸೂಚನೆಗಳನ್ನು ಪಾಲಿಸಿ ಈ ನೇಮಕ ಪ್ರಕ್ರಿಯೆಗಳನ್ನು ಕಾಲೇಜುಗಳು ಪ್ರಾರಂಭಿಸಿದ್ದವು. ಒಂದೂವರೆ ವರ್ಷಗಳ ಹಿಂದೆಯೇ ಸಂದರ್ಶನವನ್ನೂ ನಡೆಸಲಾಗಿದೆ. ಆಗಲೇ ಮಾಡಬಹುದಿತ್ತು. ವಿನಾಕಾರಣ ವಿಳಂಬ ಮಾಡಲಾಗುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಸದ್ಯ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಅತಿಥಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದೇವೆ. ಆನ್‌ಲೈನ್‌–ಆಫ್‌ಲೈನ್‌ ತರಗತಿಗಳನ್ನೂ ತೆಗೆದುಕೊಳ್ಳುತ್ತಿದ್ದೇವೆ. ಆದರೂ ನಮಗೆ ನೇಮಕಾತಿ ಆದೇಶ ಪತ್ರ ನೀಡುತ್ತಿಲ್ಲ. ಎಷ್ಟೋ ಅಭ್ಯರ್ಥಿಗಳು ವಯೋಮಿತಿ ಮೀರುವ ಆತಂಕದಲ್ಲಿದ್ದಾರೆ’ ಎಂದರು.

ಸುಮಾರು 300 ಅಭ್ಯರ್ಥಿಗಳು ನೇಮಕಾತಿ ಆದೇಶ ಪತ್ರದ ನಿರೀಕ್ಷೆಯಲ್ಲಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್‌ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.