ADVERTISEMENT

ಕಟ್ಟಡ ನಕ್ಷೆ ಅನುಮತಿ ಇಲ್ಲದೆ ಮನೆ ಕಟ್ಟಬೇಡಿ: ಡಿ.ಕೆ. ಶಿವಕುಮಾರ್

‘ಸುಪ್ರೀಂ ತೀರ್ಪು: ಸಮಸ್ಯೆ ಬಗೆಹರಿಸಲು ಯತ್ನ’

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 23:43 IST
Last Updated 25 ಜೂನ್ 2025, 23:43 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಕಟ್ಟಡ ನಕ್ಷೆ ಮಂಜೂರು, ಸ್ವಾಧೀನ ಪ್ರಮಾಣಪತ್ರ ಇಲ್ಲದೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಹೀಗಾಗಿ, ಅನುಮತಿ ಇಲ್ಲದೆ ಜನರು ಮನೆ ಕಟ್ಟಬಾರದು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ 2.50 ಲಕ್ಷ ಜನ ಕಟ್ಟಡ ನಕ್ಷೆ ಅನುಮತಿ ಪಡೆಯದೆ ಮನೆ ಕಟ್ಟಿಕೊಂಡು, ವಿದ್ಯುತ್ ಹಾಗೂ ನೀರಿನ ಸಂಪರ್ಕಕ್ಕೆ ಅರ್ಜಿ ಹಾಕಿದ್ದಾರೆ. ಈ ವಿಚಾರದಲ್ಲಿ ಸಾರ್ವಜನಿಕರಿಗೆ ಹೇಗೆ ನೆರವಾಗಬಹುದು ಎಂಬ ಬಗ್ಗೆ ಕಾನೂನು ಸಲಹೆಗಾರರಿಂದ ಅಭಿಪ್ರಾಯ ಕೇಳಿದ್ದೇನೆ’ ಎಂದರು.

‘ಸುಪ್ರೀಂ ಕೋರ್ಟ್ ತೀರ್ಪು ಇಡೀ ದೇಶಕ್ಕೆ ಅನ್ವಯವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಲಿದೆ’ ಎಂದೂ ಹೇಳಿದರು.

ADVERTISEMENT

‘ಕೆಲವರು ಬೆಸ್ಕಾಂಗೆ ಠೇವಣಿ ಪಾವತಿ ಮಾಡಿದ್ದು, ಈ ವಿಚಾರವಾಗಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುತ್ತೇನೆ. ಈ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬಹುದು ಎಂದು ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇನೆ. ಬೇರೆ ರಾಜ್ಯಗಳಲ್ಲಿ ಈ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಲಿದ್ದಾರೆ ಎಂದು ಮಾಹಿತಿ ಕಲೆಹಾಕುತ್ತೇವೆ. ಸುಪ್ರೀಂ ಕೋರ್ಟ್ ನಿರ್ದೇಶನದ ಕಾರಣಕ್ಕೆ, ಇನ್ನು ಮುಂದೆ ಕಟ್ಟಡ ನಕ್ಷೆ ಅನುಮೋದನೆ ಪಡೆಯದೆ ಯಾರೂ ಮನೆ ಕಟ್ಟಬಾರದು. ಅಕ್ರಮವಾಗಿ ಮನೆ ಕಟ್ಟಿದರೆ ಸಕ್ರಮ ಮಾಡುವುದು ಕಷ್ಟ. ನೀರು ಹಾಗೂ ವಿದ್ಯುತ್ ಸಂಪರ್ಕ ಸಿಗುವುದಿಲ್ಲ’ ಎಂದರು.

‘ಬೇರೆ ರಾಜ್ಯದಲ್ಲಿ ಇದು ಜಾರಿಯಾಗಿಲ್ಲ. ನಮ್ಮ ರಾಜ್ಯದಲ್ಲಿ ಆತುರದಲ್ಲಿ ಜಾರಿ ಮಾಡುತ್ತಿರುವುದು ಏಕೆ’ ಎಂಬ ಪ್ರಶ್ನೆಗೆ, ‘ತೀರ್ಪು ಬಂದ ನಂತರ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ನ್ಯಾಯಾಲಯದ ಆದೇಶ ಪಾಲಿಸುವಂತೆ ಸೂಚಿಸಿದೆ. ನೀವು ಆತುರದ ನಿರ್ಧಾರ ಎಂದು ಹೇಳಬಹುದು. ಆದರೆ, ಅಧಿಕಾರಿಗಳು ತಮಗೆ ಮುಂದೆ ತೊಂದರೆ ಆಗಬಾರದು ಎಂದು ಮೈಗೆ ಎಣ್ಣೆ ಹಚ್ಚಿಕೊಂಡಿರುತ್ತಾರೆ. ನಮ್ಮ ಮೇಲೆ ಹಾಕುತ್ತಾರೆ. ಹೀಗಾಗಿ, ಈ ಸಮಸ್ಯೆ ಬಗೆಹರಿಸಲು ನಾವು ಮುಂದಾಗಿದ್ದೇವೆ. ಕಾನೂನು ಚೌಕಟ್ಟಿನಲ್ಲೇ ಜನರಿಗೆ ಸಹಾಯ ಮಾಡಬೇಕಿದೆ’ ಎಂದು ಹೇಳಿದರು. 

‘ಅಕ್ರಮ ಇದ್ದರೂ ನೀರಿನ ಸಂಪರ್ಕ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹಿಂದೆ ಆದೇಶ ನೀಡಿತ್ತು’ ಎಂಬ ವಿಚಾರವಾಗಿ ಕೇಳಿದಾಗ, ‘ಈ ಹಿಂದಿನ ಆದೇಶ ಮುಖ್ಯವೊ, ಈಗ ಹೊರಡಿಸಿರುವ ಆದೇಶ ಮುಖ್ಯವೊ? ಇದೇ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸಿದ ಕಾರಣ ವಿಚಾರಣೆ ಮಾಡಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಜೊತೆಗೆ ಇದನ್ನು ಜಾರಿಗೊಳಿಸುವಂತೆಯೂ ಆದೇಶ ನೀಡಿದೆ’ ಎಂದರು.

ಅಕ್ರಮ–ಸಕ್ರಮ ಮಸೂದೆ ತರಬಹುದಲ್ಲವೇ ಎಂದು ಕೇಳಿದಾಗ, ‘ಸುಪ್ರೀಂ ಕೋರ್ಟ್ ಈಗಾಗಲೇ ಇದಕ್ಕೆ ತಡೆ ನೀಡಿದೆ. ನಮ್ಮ ಸರ್ಕಾರ ‘ಎ’ ಖಾತಾ, ‘ಬಿ’ ಖಾತಾ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದೆ. ನಾವು 110 ಹಳ್ಳಿಗಳಿಗೆ ನೀರಿನ ಸಂಪರ್ಕ ನೀಡಲು ಮುಂದಾಗಿದ್ದೆವು. ಈ ತೀರ್ಪಿನ ನಂತರ ಜಲಮಂಡಳಿಗೆ ತೊಂದರೆಯಾಗಿದೆ. ಕಳೆದ ವರ್ಷ ಜೂನ್‌ ತಿಂಗಳಲ್ಲಿ 39 ಸಾವಿರ ನೀರಿನ ಸಂಪರ್ಕ ನೀಡಿದ್ದೆವು. ಈ ವರ್ಷ ಕೇವಲ 300 ಸಂಪರ್ಕ ನೀಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.