ದೊರೆಸ್ವಾಮಿ
ಬೆಂಗಳೂರು: ‘ರಾಜ್ಯದ ಶೈಕ್ಷಣಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿರುವ ಎಂ.ಆರ್. ದೊರೆಸ್ವಾಮಿ ಅವರು, ತಮ್ಮ ಶಿಸ್ತು, ಸಂಯಮ, ಪರಿಶ್ರಮ ಮತ್ತು ದಣಿವರಿಯದ ದುಡಿಮೆಯಿಂದಾಗಿ ಶಿಕ್ಷಣ ಕ್ಷೇತ್ರದ ದೊರೆ ಆಗಿದ್ದರು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಮಾರ್ಚ್ 6ರಂದು ದೊರೆಸ್ವಾಮಿ ಅವರು ನಿಧನ ಹೊಂದಿದ್ದರು. ವಿಧಾನ ಪರಿಷತ್‌ನಲ್ಲಿ ಸೋಮವಾರ ಸಂತಾಪ ಸೂಚನೆ ಮಂಡಿಸಿ ಮಾತನಾಡಿದ ಹೊರಟ್ಟಿ, ‘2008ರಿಂದ 2014ರವರೆಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಹೊಂದಿದ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದರು’ ಎಂದರು.
‘ಪಿಇಎಸ್ ಶಿಕ್ಷಣ ಸಂಸ್ಥೆ ಕಟ್ಟಿ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುವುದರ ಮೂಲಕ ಅವರು ಶಿಕ್ಷಣೋದ್ಯಮಿಯಾದರು. ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರರಾಗಿ ಎರಡು ಬಾರಿ ಕಾರ್ಯನಿರ್ವಹಿಸಿದ್ದ ಅವರು, ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು’ ಎಂದರು.
‘ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅವರು ನೀಡಿರುವ ಅಪಾರ ಕೊಡುಗೆಗಾಗಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಯುಎಸ್ ಶಿಕ್ಷಣ ಸಂಸ್ಥೆಯಿಂದ ಫುಲ್‍ಬೈಟ್ ಫೆಲೋಶಿಪ್, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಅವರು, ಹಲವು ಪ್ರಶಸ್ತಿ, ಪುರಸ್ಕಾರಗಳಿಗೂ ಭಾಜನರಾಗಿದ್ದರು’ ಎಂದರು.
ದೊರೆಸ್ವಾಮಿ ಅವರ ನಿಧನಕ್ಕೆ ಸಭಾ ನಾಯಕ ಎನ್.ಎಸ್. ಬೋಸರಾಜು ಮತ್ತು ವಿರೋಧ ಪಕ್ಷದ ಪರವಾಗಿ ಬಿಜೆಪಿಯ ಸಿ.ಟಿ. ರವಿ ಸಂತಾಪ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.