ಬೆಂಗಳೂರು: ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ರಕ್ಷಣಾ ವೈಮಾನಿಕ ಸಂಶೋಧನಾ ಸಂಸ್ಥೆಗಳಿಗೆ (ಡಿಎಆರ್‌ಇ) ದೋಷಪೂರಿತ ಸಾಧನಗಳನ್ನು ಪೂರೈಸಿ ವಂಚಿಸಲಾಗಿದೆ’ ಎಂಬ ಆರೋಪ ಎದುರಿಸುತ್ತಿರುವ ಅಮೆರಿಕದ ಮೆಸರ್ಸ್ ಎಕಾನ್ ಕಂಪನಿ ಅಧ್ಯಕ್ಷ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೂರ್ಯ ಸರೀನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
‘ನನ್ನ ವಿರುದ್ಧ ಸಿಬಿಐ ತನಿಖೆಯ ಪ್ರಕರಣವನ್ನು ರದ್ದುಪಡಿಸಬೇಕು’ ಎಂದು ಕೋರಿ 76 ವರ್ಷದ ಸೂರ್ಯ ಸರೀನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.
‘ದೋಷಾರೋಪ ಪಟ್ಟಿಯ ಸಾರಾಂಶ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಪೂರ್ಣವಾಗಿ ಗಮನಿಸಿದರೆ, ಆರೋಪಗಳಲ್ಲಿ ಅರ್ಜಿದಾರರ ಪಾತ್ರ ಇರುವುದು ಸ್ಪಷ್ಟವಾಗಿ ಕಾಣಬರುತ್ತದೆ. ಸಾಕ್ಷಿಗಳ ಹೇಳಿಕೆಗಳು ಅರ್ಜಿದಾರರು ಏನು ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತವೆ’ ಎಂದು ನ್ಯಾಯಪೀಠ ಹೇಳಿದೆ.
‘ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 420 ಮತ್ತು 120 ಬಿ ಅಡಿಯಲ್ಲಿ ಹೊರಿಸಲಾಗಿರುವ ಆರೋಪಗಳನ್ನು ದೃಢಪಡಿಸುವ ಸಾಕ್ಷ್ಯಾಧಾರಗಳಿವೆ. ಈ ಹಂತದಲ್ಲಿ ನ್ಯಾಯಾಲಯ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡಿದರೆ ಅದು ಸುಪ್ರೀಂ ಕೋರ್ಟ್‌ನ ತೀರ್ಪಿನ ಉಲ್ಲಂಘನೆಯಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಪ್ರಸ್ತುತ ಪ್ರಕರಣವು ಜಾಗತಿಕ ಟೆಂಡರ್ ವಿಷಯಕ್ಕೆ ಒಳಪಟ್ಟಿದೆ. ಇದರಲ್ಲಿ ಯಶಸ್ವಿ ಬಿಡ್‌ದಾರರು ಡಿಆರ್‌ಡಿಒಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ವಿಚಾರಣೆಗೆ ವಿಳಂಬ ಮಾಡಿದೆ ಎಂಬ ಅರ್ಜಿದಾರರ ವಾದಾಂಶವನ್ನು ಸಮರ್ಥಿಸಲು ಆಗದು. ನಾಲ್ಕನೇ ಆರೋಪಿಯಾಗಿರುವ ಅರ್ಜಿದಾರರ ಪಾತ್ರ ಪ್ರಕರಣದಲ್ಲಿ ಅತ್ಯಂತ ಸ್ಪಷ್ಟವಾಗಿದೆ’ ಎಂದು ನ್ಯಾಯಪೀಠ ಹೇಳಿದೆ. ಸಿಬಿಐ ಪರ ಪಿ.ಪ್ರಸನ್ನ ಕುಮಾರ್ ಮತ್ತು ಪಿ.ರಾಹುಲ್ ಕೃಷ್ಣಾರೆಡ್ಡಿ ವಾದ ಮಂಡಿಸಿದ್ದರು.
ಪ್ರಕರಣವೇನು?: ‘ಜಾಗತಿಕ ಟೆಂಡರ್‌ನಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದ ಅರ್ಜಿದಾರರ ಕಂಪನಿ 2007-2009ರ ನಡುವೆ ಒಟ್ಟು 34 ದೋಷಪೂರಿತ ಸಾಧನಗಳನ್ನು (ರೇಡಿಯೋ ಫ್ರೀಕ್ವೆನ್ಸಿ ಜನರೇಟರ್) ಪೂರೈಕೆ ಮಾಡಿದೆ ಮತ್ತು ಇದಕ್ಕೆ ಸಂಬಂಧಿಸಿದ ಅರ್ಹ ಮೊತ್ತವನ್ನೂ ಸ್ವೀಕರಿಸಿದೆ. ನಂತರದಲ್ಲಿ ಈ ಸಾಧನಗಳು ದೋಷಪೂರಿತವಾಗಿವೆ ಎಂಬ ಅಂಶ ಕಂಡುಬಂದಿದೆ’ ಎಂದು ಆರೋಪಿಸಿ, ಡಿಆರ್‌ಡಿಒ ಮತ್ತು ಡಿಎಆರ್‌ಇ ವಿಚಕ್ಷಣಾ ದಳಕ್ಕೆ ದೂರು ಸಲ್ಲಿಸಿದ್ದವು. ಆರೋಪವು ಪ್ರಾಥಮಿಕ ಹಂತದಲ್ಲಿ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.