ADVERTISEMENT

ಕಾರ್ಮಿಕರು, ವ್ಯಾ‍ಪಾರಿಗಳಿಗೆ ₹4 ಕೋಟಿ ಮೋಸ

ಐಎಂಎ ಹಗರಣದ ಬೆನ್ನಲ್ಲೇ ಗ್ರೇಟ್‌ ಫೋರ್ಟ್‌ ಮೈನಾರಿಟಿಸ್‌ ಮಲ್ಟಿಪರ್ಪಸ್‌ ಸೌಹಾರ್ದ ಕೋ–ಆಪರೇಟಿವ್‌ ಬ್ಯಾಂಕ್‌ ಠೇವಣಿದಾರರು ಕಂಗಾಲು

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 17:44 IST
Last Updated 18 ಜೂನ್ 2019, 17:44 IST

ಚಿತ್ರದುರ್ಗ: ಪಿಗ್ಮಿ ಹಾಗೂ ನಿಶ್ಚಿತ ಠೇವಣಿಯ ಮೂಲಕ ಬೀದಿ ಬದಿ ವ್ಯಾಪಾರಿಗಳು ಹಾಗೂ ಕಾರ್ಮಿಕರಿಂದ ಹಣ ಸಂಗ್ರಹಿಸಿದ್ದ ‘ಗ್ರೇಟ್‌ ಫೋರ್ಟ್‌ ಮೈನಾರಿಟಿಸ್‌ ಮಲ್ಟಿಪರ್ಪಸ್‌ ಸೌಹಾರ್ದ ಕೋ–ಆಪರೇಟಿವ್‌ ಲಿಮಿಟೆಡ್‌’ ಬಾಗಿಲು ಮುಚ್ಚಿದ್ದು, ಠೇವಣಿದಾರರು ಕಂಗಾಲಾಗಿದ್ದಾರೆ.

‘ಐ ಮಾನಿಟರಿ ಅಡ್ವೈಸರಿ’ (ಐಎಂಎ) ಸಾವಿರಾರು ಕೋಟಿ ರೂಪಾಯಿ ಷೇರು ಸಂಗ್ರಹಿಸಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ, ಚಿತ್ರದುರ್ಗದ ನೂರಾರು ಜನ ಮಂಗಳವಾರ ಬೀದಿಗೆ ಇಳಿದಿದ್ದಾರೆ. ವಂಚನೆ ಮಾಡಿರುವ ಕಂಪನಿಯ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

‘ಗ್ರೇಟ್‌ ಫೋರ್ಟ್‌ ಮೈನಾರಿಟಿಸ್‌ ಮಲ್ಟಿಪರ್ಪಸ್‌ ಸೌಹಾರ್ದ ಕೋ–ಆಪರೇಟಿವ್‌ ಬ್ಯಾಂಕ್‌’ 28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು. ಬಸವೇಶ್ವರ ಟಾಕೀಸ್‌ ರಸ್ತೆಯಲ್ಲಿ ಪ್ರಧಾನ ಕಚೇರಿಯನ್ನು ತೆರೆದಿತ್ತು. ತರಕಾರಿ ವ್ಯಾಪಾರಿಗಳು, ಕಾರ್ಮಿಕರು, ಗೃಹಿಣಿಯರಿಂದ ಠೇವಣಿ ಹಾಗೂ ಪಿಗ್ಮಿ ಸಂಗ್ರಹಿಸುತ್ತಿತ್ತು.

ADVERTISEMENT

ನಾಲ್ಕು ತಿಂಗಳ ಹಿಂದೆ ಏಕಾಏಕಿ ಬಾಗಿಲು ಮುಚ್ಚಿದೆ. ಹಣ ಹೂಡಿದವರಲ್ಲಿ ಬಹುತೇಕರು ಮುಸ್ಲಿಮರು. ಅಂದಾಜು ₹4 ಕೋಟಿ ವಂಚನೆ ಮಾಡಿರುವ ಸಾಧ್ಯತೆ ಇದೆ.

ವಂಚನೆಗೆ ಸಂಬಂಧಿಸಿದಂತೆ ನಗರ ಪೊಲೀಸ್‌ ಠಾಣೆಗೆ ತಿಂಗಳ ಹಿಂದೆ ಜನ ದೂರು ಸಲ್ಲಿಸಿದ್ದರು. ಆಡಳಿತ ಮಂಡಳಿ ಹಣ ಮರಳಿಸುವ ಭರವಸೆ ನೀಡಿದ್ದರಿಂದ ಎಫ್‌ಐಆರ್‌ ದಾಖಲಾಗಿರಲಿಲ್ಲ. ಹೂಡಿಕೆದಾರರು ಈ ಕುರಿತು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರಿಗೆ ನ್ಯಾಯ ಕೊಡಿಸುವಂತೆ ಅಂಗಲಾಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.