ADVERTISEMENT

ಮಾರ್ಗಸೂಚಿ ಪಾಲಿಸದಿದ್ದರೆ ಇನ್ನೂ ಕಠಿಣ ಕ್ರಮ: ಕಂದಾಯ ಸಚಿವ ಅಶೋಕ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 10:48 IST
Last Updated 21 ಏಪ್ರಿಲ್ 2021, 10:48 IST
ಅಶೋಕ
ಅಶೋಕ   

ಬೆಂಗಳೂರು: ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇದ್ದರೆ ಇನ್ನೂ ಕಠಿಣ ನಿಯಮಗಳನ್ನು ಜಾರಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಸೋಂಕಿನ ಸರಪಳಿ ಮುರಿಯಲು ಸಾರ್ವಜನಿಕರು ಆದಷ್ಟು ಮನೆಯಲ್ಲೇ ಇರಬೇಕು. ಅನಿವಾರ್ಯ ಇದ್ದರಷ್ಟೇ ಹೊರಗೆ ಬರಬೇಕು. 14 ದಿನಗಳಲ್ಲಿ ಸೋಂಕು ಸರಪಳಿ ಮುರಿದರೆ ಮುಂದೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ಸಾಧ್ಯ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗಾಗಿ ನಗರದಲ್ಲಿ ನಾಲ್ಕೈದು ಕಡೆಗಳಲ್ಲಿ ಜಾಗವನ್ನು ಗುರುತಿಸಲಾಗಿದೆ. ತಾವರೆಕೆರೆ ಬಳಿ ನಾಲ್ಕು ಎಕರೆ ಜಮೀನು ಗುರುತಿಸಿದ್ದು, ಅಲ್ಲಿ ಶವಗಳ ದಹನಕ್ಕೆ ಆದೇಶ ನೀಡಲಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಅನಿವಾರ್ಯವಾದರೆ ಶವಗಳ ದಹನಕ್ಕೆ ಜಾಗ ಗುರುತಿಸಲು ಸೂಚನೆ ನೀಡಲಾಗಿದೆ. ಬೆಂಗಳೂರಿನ ಗ್ರಾಮಾಂತರ ಪ್ರದೇಶದಿಂದ ಶವಗಳು ಬರುತ್ತಿರುವ ಕಾರಣ ವಿದ್ಯುತ್‌ ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಅಶೋಕ ಹೇಳಿದರು.

ADVERTISEMENT

ಮುಂದಿನ ಎರಡು ತಿಂಗಳು ಹೆಚ್ಚು ಜಾಗ್ರತೆ ವಹಿಸಿ, ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕೋವಿಡ್‌ ತಾರಕಕ್ಕೆ ಏರಿದೆ. ಅಲ್ಲಿ ರೀತಿ ಇಲ್ಲಿ ಆಗಬಾರದು. ಸರ್ಕಾರ ಒಂದು ತಂಡವಾಗಿ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.