ADVERTISEMENT

ಎಂಜಿನಿಯರಿಂಗ್ ಕಾಲೇಜು: ಹೆಚ್ಚುವರಿ ಶುಲ್ಕ ಹಿಂತಿರುಗಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 16:45 IST
Last Updated 6 ಡಿಸೆಂಬರ್ 2021, 16:45 IST

ಬೆಂಗಳೂರು: ‘ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ಮೆರಿಟ್‌ ವಿದ್ಯಾರ್ಥಿಗಳಿಂದ ಪಡೆದ ಹೆಚ್ಚುವರಿ ಶುಲ್ಕ ಹಿಂದಿರುಗಿಸುವ ಕುರಿತ ಮನವಿಯನ್ನು ಪರಿಗಣಿಸಿ ಆದಷ್ಟು ಶೀಘ್ರ ಕ್ರಮ ಕೈಗೊಳ್ಳಿ’ ಎಂದು ಶುಲ್ಕ ನಿಯಂತ್ರಣ ಸಮಿತಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಕುರಿತಂತೆಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಮೊಹಮ್ಮದ್ ನೌಫಾಲ್‌ ಹಾಗೂ ಮೊಹಮದ್‌ ರಫೀಕ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಎಸ್.ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಲೇವಾರಿ ಮಾಡಿದೆ.

ಅರ್ಜಿದಾರರ ಪರ ವಕೀಲ ಕೆ.ಅಭಿಷೇಕ್‌, ‘ಅರ್ಜಿದಾರರು ಮೆರಿಟ್‌ ಆಧಾರದಲ್ಲಿ ಎಂಜಿನಿಯರಿಂಗ್‌ ಸೀಟು ಪಡೆದು ಸಿಇಟಿ ಮೂಲಕ ಪ್ರವೇಶ ಪಡೆದಿದ್ದಾರೆ. ಆದರೆ, ಕಾಲೇಜು ಆಡಳಿತ ಮಂಡಳಿಯು ಅವರಿಂದ ಹೆಚ್ಚುವರಿ ಶುಲ್ಕ ಸಂಗ್ರಹಿಸಿದೆ. ಇದು ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳು (ಪ್ರವೇಶ ಮತ್ತು ಶುಲ್ಕನಿಗದಿ ನಿಯಂತ್ರಣ) ಕಾಯ್ದೆ–2006ರ ಕಲಂ 4 ಹಾಗೂ ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ ಮತ್ತು ಸರ್ಕಾರದ ನಡುವಿನ ಸಹಮತದ ಒಪ್ಪಂದಕ್ಕೆ ವಿರುದ್ಧವಾಗಿದೆ. ಈ ಕುರಿತಂತೆ ಶುಲ್ಕ ನಿಯಂತ್ರಣ ಸಮಿತಿ ಕೂಡಲೇ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು’ ಎಂದು ಕೋರಿದರು.

ADVERTISEMENT

ವಾದವನ್ನು ಪರಿಗಣಿಸಿದ ನ್ಯಾಯಪೀಠ,‘ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ 2017–18ರ ಶೈಕ್ಷಣಿಕ ಸಾಲಿನಲ್ಲಿ ಅರ್ಜಿದಾರವಿದ್ಯಾರ್ಥಿಗಳಿಂದ ಕಾನೂನು ಬಾಹಿರವಾಗಿ₹ 1,67,160 ಹೆಚ್ಚುವರಿ ಶುಲ್ಕ ಸಂಗ್ರಹಿಸಿದ್ದು, ಇದನ್ನು ಹಿಂತಿರುಗಿಸುವಂತೆ ಅವರು ಸಲ್ಲಿಸಲಾಗುವ ಅರ್ಜಿಯನ್ನು ಶೀಘ್ರವೇ ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಿ’ ಎಂದು ಶುಲ್ಕ ನಿಯಂತ್ರಣ ಸಮಿತಿಗೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.