ಬೆಂಗಳೂರು: ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಬಳಿ ‘ಕಾವೇರಿ ಆರತಿ’ ಆಯೋಜಿಸುವ ತೀರ್ಮಾನ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ‘ಕಾವೇರಿ ಆರತಿ ಯೋಜನೆಗೆ ತಾಂತ್ರಿಕ ಸಲಹೆ ಪಡೆದಿಲ್ಲ ಎಂಬ ನಿಮ್ಮ ಆಕ್ಷೇಪಣೆಯನ್ನು ದೃಢಪಡಿಸುವ ದಾಖಲೆ ಸಲ್ಲಿಸಿ’ ಎಂದು ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಸಂಬಂಧ ರೈತ ಸಂಘದ ನಾಯಕಿ ಮಂಡ್ಯ ಜಿಲ್ಲೆಯ ಸುನಂದಾ ಜಯರಾಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ್ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಹೈಕೋರ್ಟ್‌ನ ಹಿರಿಯ ವಕೀಲ ಎಂ.ಶಿವಪ್ರಕಾಶ್, ‘ಕಾವೇರಿ ಆರತಿಗಾಗಿ ₹100 ಕೋಟಿ ವೆಚ್ಚ ಮಾಡಲಾಗುತ್ತಿದೆ. ಜಲಾಶಯದ 40 ಮೀಟರ್ ಅಂತರದಲ್ಲಿ 20 ಸಾವಿರದಿಂದ 25 ಸಾವಿರ ಜನರು ಜಮಾಯಿಸುವಂತಹ ದೊಡ್ಡ ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತಿದೆ. ಕನ್ನಂಬಾಡಿ ಕಟ್ಟೆಯ ಬಳಿಯಲ್ಲೇ 5 ಸಾವಿರ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದು ಜಲಾಶಯದ ಸುರಕ್ಷತೆ ಮತ್ತು ಭದ್ರತೆಗೆ ಅಪಾಯಕಾರಿ. ಜಲ, ಪರಿಸರ ಹಾಗೂ ವಾಯುಮಾಲಿನ್ಯಕ್ಕೂ ಕಾರಣವಾಗಲಿದೆ. ಅಲ್ಲದೇ, ಸರ್ಕಾರದ ಈ ನಿರ್ಧಾರ 2021ರ ಜಲಾಶಯ ಸುರಕ್ಷತಾ ಕಾಯ್ದೆಗೆ ವಿರುದ್ಧವಾಗಿದೆ’ ಎಂದು ಪ್ರತಿಪಾದಿಸಿದರು.
ವಾದ ಆಲಿಸಿದ ನ್ಯಾಯಪೀಠ, ‘ತಾಂತ್ರಿಕ ವರದಿ ಸಲ್ಲಿಸಿ’ ಎಂದು ಶಿವಪ್ರಕಾಶ್ ಅವರಿಗೆ ನಿರ್ದೇಶಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ (ಜೂನ್ 27) ಮುಂದೂಡಿತು. ಕಾವೇರಿ ನೀರಾವರಿ ನಿಗಮದ ಪರ ಪದಾಂಕಿತ ಹಿರಿಯ ವಕೀಲ ಉದಯ ಹೊಳ್ಳ ಅವರು ಹಾಜರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.