ADVERTISEMENT

ನಾಯಕರ ಭರವಸೆ ನಡುವೆಯೂ ವಲಸೆ

ಕೆಲಸ ಹುಡುಕಿಕೊಂಡು ಬೇರೆಡೆ ಗುಳೇ ಹೋಗುತ್ತಿರುವ ಗ್ರಾಮಸ್ಥರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 30 ಅಕ್ಟೋಬರ್ 2018, 19:31 IST
Last Updated 30 ಅಕ್ಟೋಬರ್ 2018, 19:31 IST
ಮಹಿಳೆಯೊಬ್ಬರು ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು, ಸಾಮಾನು ಸರಂಜಾಮು ಹೊತ್ತ ಕುದುರೆಯೊಂದಿಗೆ ಮಂಗಳವಾರ ಹೊಸಪೇಟೆಯ ಅನಂತಶಯನಗುಡಿಯಿಂದ ಬೇರೆಡೆ ವಲಸೆ ಹೋದರು. ಅವರ ಹಿಂದೆ ಸುಮಾರು 50ಕ್ಕೂ ಅಧಿಕ ಜನ ಹೆಜ್ಜೆ ಹಾಕಿದರುಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರ
ಮಹಿಳೆಯೊಬ್ಬರು ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು, ಸಾಮಾನು ಸರಂಜಾಮು ಹೊತ್ತ ಕುದುರೆಯೊಂದಿಗೆ ಮಂಗಳವಾರ ಹೊಸಪೇಟೆಯ ಅನಂತಶಯನಗುಡಿಯಿಂದ ಬೇರೆಡೆ ವಲಸೆ ಹೋದರು. ಅವರ ಹಿಂದೆ ಸುಮಾರು 50ಕ್ಕೂ ಅಧಿಕ ಜನ ಹೆಜ್ಜೆ ಹಾಕಿದರುಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರ   

ಹೊಸಪೇಟೆ: ಬಳ್ಳಾರಿ ಲೋಕಸಭೆ ಉಪಚುನಾವಣೆ ಸಮರದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಜನರ ಬದುಕು ಹಸನು ಮಾಡುವ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ, ಅದಕ್ಕೂ ತಮಗೂ ಸಂಬಂಧವಿಲ್ಲವೆಂಬಂತೆ ಸ್ಥಳೀಯರು ಉದ್ಯೋಗ ಅರಸಿ ಬೇರೆಡೆ ಗುಳೇ ಹೋಗುತ್ತಿದ್ದಾರೆ.

ಕುದುರೆ, ಕತ್ತೆ, ಚಕ್ಕಡಿಗಳ ಮೇಲೆ ಸಾಮಾನು ಸರಂಜಾಮುಗಳನ್ನು ಹೇರಿಕೊಂಡು, ಮಟ ಮಟ ಬಿಸಿಲಲ್ಲೇ ಮಕ್ಕಳು, ಮರಿಗಳೊಂದಿಗೆ ನಿತ್ಯ ಪರ ಊರುಗಳ ಕಡೆಗೆ ಹೆಜ್ಜೆ ಹಾಕುತ್ತಿರುವುದು ಸಾಮಾನ್ಯ ವಿಷಯವಾಗಿದೆ. ನಿತ್ಯ ಏನಿಲ್ಲವೆಂದರೂ 50ರಿಂದ 100 ಜನ ಹೊಟ್ಟೆ ಪಾಡಿಗಾಗಿ ಸ್ವಂತ ಊರು ತೊರೆದು ಅನ್ಯ ಜಿಲ್ಲೆಗಳ ಕಡೆಗೆ ತೆರಳುತ್ತಿದ್ದಾರೆ.

ತಾಲ್ಲೂಕಿನ ಕಮಲಾಪುರ ತಾಂಡಾ, ಸೀತಾರಾಮ ತಾಂಡಾ, ಎಚ್‌.ಪಿ.ಸಿ. ಕ್ಯಾಂಪ್, ಚಿಲಕನಹಟ್ಟಿ, ತಿಮ್ಮಲಾಪುರ, ವ್ಯಾಸನಕೆರೆ, ಪಾಪಿನಾಯಕನಹಳ್ಳಿ, ಬೈಲುವದ್ದಿಗೇರಿ ಸೇರಿದಂತೆ ವಿವಿಧ ಊರು ಹಾಗೂ ತಾಂಡಾಗಳ ಜನ ಗುಳೇ ಹೋಗುತ್ತಿದ್ದಾರೆ. ಬೇರೆ ಊರುಗಳ ಜನರೂ ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಸೋಮವಾರ ಹಾಗೂ ಮಂಗಳವಾರ ಎರಡೇ ದಿನಗಳಲ್ಲಿ ಇನ್ನೂರಕ್ಕೂ ಹೆಚ್ಚು ಜನ ನಗರದ ಮುಖ್ಯ ರಸ್ತೆ ಮೂಲಕ ಬೇರೆಡೆ ತೆರಳಿದರು.

ADVERTISEMENT

ಜಿಲ್ಲೆಯಲ್ಲಿ ಹಲವು ದಿನಗಳಿಂದ ಇದು ಮುಂದುವರಿದಿದ್ದು, ವಲಸಿಗರನ್ನು ತಡೆದು ಸ್ಥಳೀಯವಾಗಿ ಉದ್ಯೋಗ ಕೊಡುವ ಕೆಲಸವಾಗಿಲ್ಲ. ಲೋಕಸಭೆ ಉಪಚುನಾವಣೆಯಲ್ಲಿ ಸಂಪೂರ್ಣ ಜಿಲ್ಲಾ ಆಡಳಿತವೇ ತೊಡಗಿಸಿಕೊಂಡಿದೆ. ಸಹಜವಾಗಿಯೇ ಅದರ ಗಮನ ಜನರ ಕಡೆ ಹರಿದಿಲ್ಲ. ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಮುಖಂಡರು, ಫಲಿತಾಂಶದ ನಂತರ ‘ಸ್ವರ್ಗ’ ತೋರಿಸುವ ಭರವಸೆ ನೀಡುತ್ತಿದ್ದಾರೆ. ಆದರೆ, ಜನ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

‘ದಿನ ಕೆಲಸ ಮಾಡಿದರಷ್ಟೇ ಮನೆ ಮಂದಿಯ ಹೊಟ್ಟೆ ತುಂಬುತ್ತದೆ. ಇಲ್ಲದಿದ್ದರೆ ತಣ್ಣೀರು ಬಟ್ಟೆಯೇ ಗತಿ. ಎಲ್ಲೂ ಕೆಲಸ ಸಿಗುತ್ತಿಲ್ಲ. ಅನಿವಾರ್ಯವಾಗಿ ಬೆಂಗಳೂರಿಗೆ ಹೋಗುತ್ತಿದ್ದೇವೆ. ದೊಡ್ಡ ಊರುಗಳಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಯಾವುದಾದರೂ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇದೆ. ಈಗಾಗಲೇ ನಮ್ಮೂರು ಹಾಗೂ ಸುತ್ತಮುತ್ತಲಿನ ಅನೇಕ ಜನ ಅಲ್ಲಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಎಚ್‌.ಪಿ.ಸಿ. ಕ್ಯಾಂಪಿನ ಸಿದ್ದಮ್ಮ, ಪಾಪಿನಾಯಕನಹಳ್ಳಿಯ ಭಾಗ್ಯಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಈಗ ಕಬ್ಬು ಕಟಾವು ಮಾಡುವ ಸೀಸನ್‌. ಆದರೆ, ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವೆ ಮಾತುಕತೆ ನಡೆದಿಲ್ಲ. ಕಬ್ಬಿನ ಬೆಲೆ ನಿಗದಿಯಾಗಿಲ್ಲ. ಜಿಲ್ಲಾಧಿಕಾರಿಗಳು, ರೈತರು ಹಾಗೂ ಕಾರ್ಖಾನೆಗಳ ಮಾಲೀಕರ ಸಭೆ ಕರೆದು, ಬೆಲೆ ನಿಗದಿಪಡಿಸುವ ಗೋಜಿಗೆ ಹೋಗಿಲ್ಲ. ಅಂಕೋಲಾ–ಗುತ್ತಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸ ಸಹ ಅರ್ಧಕ್ಕೆ ನಿಂತಿದೆ. ಎಲ್ಲೆಡೆ ಬರದ ವಾತಾವರಣ ಇದೆ. ಸ್ಥಳೀಯರಿಗೆ ಕೆಲಸವಿಲ್ಲದಂತಾಗಿ ಬೇರೆ ಕಡೆ ಹೋಗುತ್ತಿದ್ದಾರೆ’ ಎಂದು ಜನಸಂಗ್ರಾಮ ಪರಿಷತ್ತಿನ ಮುಖಂಡ ಶಿವಕುಮಾರ ಮಾಳಗಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.