ಬೆಂಗಳೂರು: ನಗರ ಹಾಗೂ ಗ್ರಾಮೀಣ ಪ್ರದೇಶಗಳ ಆಸ್ತಿ ನೋಂದಣಿಯಲ್ಲಿನ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಲು ನಿರ್ಧರಿಸಿರುವ ಕಂದಾಯ ಇಲಾಖೆ, ಅದಕ್ಕಾಗಿ ಭೌಗೋಳಿಕ ದತ್ತಾಂಶ ಆಧಾರಿತ ತಂತ್ರಾಂಶ (ಜಿಐಎಸ್) ರೂಪಿಸುತ್ತಿದೆ.
ಜಿಐಎಸ್ ತಂತ್ರಾಂಶ ಸಿದ್ಧಪಡಿಸುವ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಕಲಬುರಗಿ, ಚಾಮರಾಜನಗರ ಜಿಲ್ಲೆಯ ತಲಾ ಒಂದು ತಾಲ್ಲೂಕು ಹಾಗೂ ನೆಲಮಂಗಲ, ಹೊಸದುರ್ಗದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಸಿದ್ಧತೆ ನಡೆದಿದೆ.
ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ದತ್ತಾಂಶ ಬಳಸಿಕೊಂಡು ಇ–ಆಡಳಿತ, ಕಂದಾಯ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಂಟಿಯಾಗಿ ಹೊಸ ನೋಂದಣಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಿವೆ. ಭೌಗೋಳಿಕ ದತ್ತಾಂಶ ಬಳಸಿಕೊಂಡು ಜಮೀನು, ಕಟ್ಟಡ, ನಿವೇಶನ, ರಸ್ತೆಗಳನ್ನು ಖಚಿತವಾಗಿ ನಮೂದಿಸಿ, ಆಸ್ತಿಗಳ ನೋಂದಣಿ ಮಾಡಲಾಗುತ್ತದೆ.
ಈಗ ಇರುವ ವ್ಯವಸ್ಥೆಯಲ್ಲಿ ನೋಂದಣಿ ಮಾಡುವಾಗ ಕೆಲವರು ಅಧಿಕಾರಿಗಳ ಜತೆ ಶಾಮೀಲಾಗಿ ತೆರಿಗೆ ವಂಚಿಸುತ್ತಿರುವ ಪ್ರಕರಣಗಳು ಕಂಡುಬಂದಿವೆ. ಕಟ್ಟಡ ಇರುವ ಜಾಗವನ್ನು ಖಾಲಿ ನಿವೇಶನವೆಂದು, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗೆ ಹೋಂದಿಕೊಂಡಂತೆ ಇದ್ದರೂ, ಒಳ ರಸ್ತೆ ಎಂದು ನಮೂದಿಸಿ ಆಸ್ತಿ ಮೌಲ್ಯವನ್ನು ಕಡಿಮೆ ಮಾಡಿಕೊಂಡು ನೋಂದಣಿ ಮಾಡಿಸುತ್ತಿರುವ ನೂರಾರು ಪ್ರಕರಣಗಳು ಪತ್ತೆಯಾಗಿವೆ. ಹೊಸ ತಂತ್ರಾಂಶ ಅಂತಹ ವಂಚನೆಗಳನ್ನು ತಡೆಯಲಿದೆ. ತಂತ್ರಾಂಶದಲ್ಲೇ ಸರ್ವೆ ನಂಬರ್, ಆಸ್ತಿ ಸಂಖ್ಯೆ ನಮೂದಿಸಿದರೆ ಸ್ವಯಂಚಾಲಿತವಾಗಿ ಮುದ್ರಾಂಕ ಶುಲ್ಕದ ದರ ನಿಗದಿಯಾಗುತ್ತದೆ. ಆಸ್ತಿಗಳ ನಿಖರ ಮೌಲ್ಯ ದೊರಕುವ ಜತೆಗೆ, ವಂಚನೆಗೂ ಕಡಿವಾಣ ಹಾಕಬಹುದು. ತೆರಿಗೆ ಸಂಗ್ರಹವೂ ಗಣನೀಯವಾಗಿ ಹೆಚ್ಚಳವಾಗಲಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಮೊದಲ ಹಂತದಲ್ಲಿ ನಾಲ್ಕು ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ ನಂತರ ಉಳಿದ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗುತ್ತದೆ. ಮುಂದಿನ ಹಂತಗಳಲ್ಲಿ ನಗರ ಪ್ರದೇಶಗಳಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.