ADVERTISEMENT

ಗಿವ್‌ ಇಂಡಿಯಾದಿಂದ 750 ಆಮ್ಲಜನಕ ಸಾಂದ್ರಕ ಕೊಡುಗೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 3:28 IST
Last Updated 6 ಜುಲೈ 2021, 3:28 IST
ಗಿವ್‌ ಇಂಡಿಯಾ ಫೌಂಡೇಶನ್‌ನಿಂದ ನೀಡಿದ ಆಮ್ಲಜನಕ ಸಾಂದ್ರಕವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸ್ವೀಕರಿಸಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಗಿವ್‌ ಇಂಡಿಯಾ ಫೌಂಡೇಶನ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅತುಲ್‌ ಸತೀಜಾ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ವಿನೋದ ಇದ್ದರು
ಗಿವ್‌ ಇಂಡಿಯಾ ಫೌಂಡೇಶನ್‌ನಿಂದ ನೀಡಿದ ಆಮ್ಲಜನಕ ಸಾಂದ್ರಕವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸ್ವೀಕರಿಸಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಗಿವ್‌ ಇಂಡಿಯಾ ಫೌಂಡೇಶನ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅತುಲ್‌ ಸತೀಜಾ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ವಿನೋದ ಇದ್ದರು   

ಬೆಂಗಳೂರು: ಕೋವಿಡ್‌ ಮೂರನೇ ಅಲೆ ಎದುರಿಸುವುದಕ್ಕಾಗಿ ಗಿವ್‌ ಇಂಡಿಯಾ ಫೌಂಡೇಶನ್‌ 750 ಆಮ್ಲಜನಕ ಸಾಂದ್ರಕಗಳನ್ನು ರಾಜ್ಯ ಸರ್ಕಾರಕ್ಕೆ ಸೋಮವಾರ ಹಸ್ತಾಂತರಿಸಿತು.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರಿಗೆ ಗಿವ್‌ ಇಂಡಿಯಾ ಫೌಂಡೇಶನ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅತುಲ್‌ ಸತೀಜಾ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ವಿನೋದ ಅವರು ಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರಿಸಿದರು.

ಆಮ್ಲಜನಕ ಸಾಂದ್ರಕಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಯಡಿಯೂರಪ್ಪ, ‘ಕೋವಿಡ್‌ ಎದುರಿಸುವ ದಿಸೆಯಲ್ಲಿ ಗಿವ್‌ ಇಂಡಿಯಾ ಫೌಂಡೇಶನ್‌ ರಾಜ್ಯಕ್ಕೆ ಗಣನೀಯ ಸಹಕಾರ ನೀಡುತ್ತಿದೆ. ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಆಗಿದ್ದಾಗ ₹ 47 ಕೋಟಿ ಮೌಲ್ಯದ 2,100 ಆಮ್ಲಜನಕ ಸಾಂದ್ರಕಗಳನ್ನು ಒದಗಿಸಿತ್ತು’ ಎಂದು ಶ್ಲಾಘಿಸಿದರು.

ADVERTISEMENT

ಗಿವ್‌ ಇಂಡಿಯಾ ಸಂಸ್ಥೆಯು ಬಿಬಿಎಂಪಿ ವ್ಯಾಪ್ತಿಯಲ್ಲಿ 125 ಹಾಸಿಗೆಗಳ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರಗಳಿಗೆ ವೈದ್ಯರ ಸೇವೆಯನ್ನು ಒದಗಿಸುತ್ತಿದೆ. ಓಲಾ ಸಹಭಾಗಿತ್ವದಲ್ಲಿ ‘ಆಕಾಂಕ್ಷ’ ವೇದಿಕೆಯ ಮೂಲಕ ಮನೆಯ ಬಾಗಿಲಿಗೆ ಆಮ್ಲಜನಕ ಸಾಂದ್ರಕಗಳನ್ನು ನೀಡುವ ಸಂಸ್ಥೆಯ ಯೋಜನೆಯಿಂದ ನೂರಾರು ಜನರ ಪ್ರಾಣ ಉಳಿದಿದೆ ಎಂದರು.

ಅಶ್ವತ್ಥನಾರಾಯಣ ಮಾತನಾಡಿ, ‘ಡಾ.ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಪಟ್ಟಿ ಮಾಡಿರುವ 114 ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೆ ಈ ಆಮ್ಲಜನಕ ಸಾಂದ್ರಕಗಳನ್ನು ಒದಗಿಸಲಾಗುವುದು’ ಎಂದು ತಿಳಿಸಿದರು.

ಬಳ್ಳಾರಿ, ಬೀದರ್‌, ರಾಯಚೂರು, ಕಲಬುರ್ಗಿ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಗೀವ್‌ ಇಂಡಿಯಾ ನೀಡಿದ ಆಮ್ಲಜನಕ ಸಾಂದ್ರಕಗಳನ್ನು ಕಳಿಸಿಕೊಡಲಾಗುವುದು ಎಂದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಸರ್ಕಾರದ ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ ಸಲಹೆಗಾರ ಕೆ.ವಿ.ಮಹೇಶ, ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ‌‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.