ADVERTISEMENT

ಸಿಎಎ ರ್‍ಯಾಲಿ ವೇಳೆ ಕೊಲೆ ಯತ್ನ ಆರೋಪ: ನಾಲ್ವರಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 9:14 IST
Last Updated 22 ಜುಲೈ 2020, 9:14 IST
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್   

ಬೆಂಗಳೂರು: ಸಿಎಎ ಮತ್ತು ಎನ್‌ಆರ್‌ಸಿ ಪರ ರ್‍ಯಾಲಿ ವೇಳೆ ಆರ್‌ಎಸ್‌ಎಸ್‌ ಸ್ವಯಂ ಸೇವಕರೊಬ್ಬರ ಕೊಲೆ ಯತ್ನದ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

2019ರಡಿಸೆಂಬರ್ 22ರಂದು ಟೌನ್ ಹಾಲ್ ಬಳಿ ರ್‍ಯಾಲಿಯನ್ನು ಸಂಸದ ತೇಜಸ್ವಿ ಸೂರ್ಯ ಆಯೋಜಿಸಿದ್ದರು.ಇದರಲ್ಲಿ ಪಾಲ್ಗೊಂಡಿದ್ದ ವರುಣ್ ಎಂಬವರನ್ನು ಹಿಂಬಾಲಿಸಿಕೊಂಡು ಹೋಗಿ ದಾಳಿ ಮಾಡಲಾಗಿದೆ ಎಂಬ ಆರೋಪದಲ್ಲಿ ಮೊಹಮದ್ ಇರ್ಫಾನ್, ಅಕ್ಬರ್ ಪಾಷಾ, ಸೈಯದ್ ಸಿದ್ಧಿಕಿ ಮತ್ತು ಸನಾಉಲ್ಲಾ ಶರೀಫ್ ಎಂಬುರನ್ನು ಪೊಲೀಸರು ಬಂಧಿಸಿದ್ದರು. ಜನವರಿ 12ರಂದು ಅವರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರು, ‘ಪೊಲೀಸರು ಹೇಳಿರುವಂತೆ ಕೃತ್ಯದ ಸಂಚು ಹಾಗೂ ಉದ್ದೇಶಗಳಲ್ಲಿ ಸ್ಪಷ್ಟತೆ ಇಲ್ಲ.‌ ಮೇಲಾಗಿ ಆರೋ‍ಪಿಗಳನ್ನು ಅವರ ದೈಹಿಕ‌ ಚಹರೆ‌ ಆಧಾರದ ಮೇಲೆ‌ಷ್ಟೇ ಗುರುತಿಸಲಾಗಿದೆ. ಇವರನ್ನು ಬಂಧನದಲ್ಲಿ ಮುಂದುವರಿಸಲು ಸಕಾರಣಗಳು ಕಾಣಿಸುತ್ತಿಲ್ಲ’ ಎಂದು ಹೇಳಿದರು.

ADVERTISEMENT

ಆರೋಪಿಗಳು ಜಾಮೀನು ಕೋರಿ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ಮಾ.2ರಂದು ತಿರಸ್ಕಾರ ಆಗಿತ್ತು. ಬಳಿಕ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

‘ಆರೋಪಿಗಳು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾಗೆ(ಪಿಎಫ್‌ಐ) ಸೇರಿದವರು. ಬಳಿಕ ಅವರು ಎಸ್‌ಡಿಪಿಐಗೆ (ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ಸೇರಿಕೊಂಡಿದ್ದಾರೆ. ಈ ಆರೋಪಿಗಳು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಆರ್‌ಎಸ್‌ಎಸ್‌ ಅಥವಾ ಹಿಂದೂ ಸಂಘಟನೆಯ ಮುಖಂಡರನ್ನು ಕೊಲ್ಲುವ ಸಂಚು ರೂಪಿಸಿದ್ದರು’ ಎಂದು ಪೊಲೀಸರು ವಿವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.