ADVERTISEMENT

ಕನ್ನಡ ಇಷ್ಟದ ಹುಡುಗಿಗೆ ಚಿನ್ನದ ಪದಕಗಳ ಮಾಲೆ

ಜಗಳೂರಿನ ವಿನಯವತಿಗೆ ಕನ್ನಡದಲ್ಲಿ ನಾಲ್ಕು ಪದಕ

ಬಾಲಕೃಷ್ಣ ಪಿ.ಎಚ್‌
Published 30 ಸೆಪ್ಟೆಂಬರ್ 2020, 4:12 IST
Last Updated 30 ಸೆಪ್ಟೆಂಬರ್ 2020, 4:12 IST
ಹೆತ್ತವರೊಂದಿಗೆ ವಿನಯವತಿ ಕೆ.ವಿ.
ಹೆತ್ತವರೊಂದಿಗೆ ವಿನಯವತಿ ಕೆ.ವಿ.   

ದಾವಣಗೆರೆ: ಇಷ್ಟಪಟ್ಟು ಕನ್ನಡದಲ್ಲಿ ಎಂ.ಎ ಮುಗಿಸಿದ ಜಗಳೂರಿನ ಹುಡುಗಿ ನಾಲ್ಕು ಚಿನ್ನದ ಪದಕ ‍ಪಡೆದಿದ್ದಾರೆ.

ಜಗಳೂರು ತಾಲ್ಲೂಕು ಕೊಡದಗುಡ್ಡ ವೇಮನಂದ ಕೆ.ಟಿ. ಹಾಗೂ ಕಲ್ಪನಾ ಬಿ. ದಂಪತಿಯ ಮಗಳು ವಿನಯವತಿ ಕೆ.ವಿ. ಈ ಸಾಧನೆ ಮಾಡಿದವರು.

ಕೊಡದಗುಡ್ಡದಲ್ಲಿ ಜಮೀನಿದ್ದರೂ ಮಕ್ಕಳಿಗೆ ಓದಿಸುವುದಕ್ಕಾಗಿ ದಾವಣಗೆರೆ ನಿಟುವಳ್ಳಿಯ ಮೌನೇಶ್ವರ ಬಡಾವಣೆಯಲ್ಲಿ ಈ ಕುಟುಂಬ ವಾಸಿಸುತ್ತಿದೆ.

ADVERTISEMENT

‘ದಾವಣಗೆರೆ ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ. ಮಾಡಿದ್ದೆ. ಅಲ್ಲಿ ಗೀತಾ ನಾಗಭೂಷಣ್‌ ಅವರ ಮಗಳು ಡಾ.ಕಾವ್ಯಶ್ರೀ ಮತ್ತು ಡಾ.ದಾದಾಪೀರ್‌ ನವಿಲೇಹಾಳ್‌ ಅವರ ಪ್ರೋತ್ಸಾಹವೇ ಸಾಹಿತ್ಯದ ಕಡೆಗೆ ನಾನು ಹೋಗಲು ಕಾರಣವಾಯಿತು. ಕನ್ನಡದಲ್ಲಿ ಎಂ.ಎ ಮಾಡಲು ಸ್ಫೂರ್ತಿಯಾಯಿತು. ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ನಾಲ್ಕು ಸ್ತಂಭಗಳಾಗಿರುವ ಡಾ.ವೀರೇಶ್‌ ಉತ್ತಂಗಿ, ಬ್ರಹ್ಮದೇವ ಹದಳಗಿ, ಎಚ್‌.ಎಸ್‌.ಶಿವಪ್ರಕಾಶ್‌, ಎಚ್‌.ವಿ.ಶಾಂತರಾಜ್‌ ಅವರಿಂದಾಗಿ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು’ ಎಂದು ವಿನಯವತಿ ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.

‘ನನ್ನ ಆಸಕ್ತಿಗೆ ಅನುಗುಣವಾಗಿ ತಂದೆ ತಾಯಿ ಓದಿಸಿದ್ದಾರೆ. ಬೆಂಬಲ ನೀಡಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್‌.ವಿ. ಹಲಸೆ ಅವರು ಗುರುತಿಸಿದ್ದಾರೆ. ಇವರೆಲ್ಲರಿಗೂ ನಾನು ಋಣಿ’ ಎಂದು ತಿಳಿಸಿದರು.

‘ಶಿಕ್ಷಕಿ ಆಗಬೇಕು, ಇಲ್ಲವೇ ಯಾವುದಾದರೂ ಸರ್ಕಾರಿ ಕೆಲಸ ಹಿಡಿಯಬೇಕು ಎಂಬುದು ನನ್ನ ಹೆತ್ತವರ ಆಸೆ. ಜನಪದ ಸಾಹಿತ್ಯದ ಮೇಲೆ ಪಿಎಚ್‌.ಡಿ ಮಾಡಿ ಯಾವುದಾದರೂ ವಿಶ್ವವಿದ್ಯಾಲಯದಲ್ಲಿಯೇ ಪ್ರೊಫೆಸರ್‌ ಆಗಬೇಕು ಎಂಬುದು ನನ್ನ ಆಸೆ. ಮುಂದೆ ಯಾವುದಾಗುತ್ತದೆ ನೋಡಬೇಕು. ಸದ್ಯ ಮಾಗನೂರು ಬಸಪ್ಪ ಕಾಲೇಜಿನಲ್ಲಿ ಬಿಇಡಿ ಮಾಡುತ್ತಿದ್ದೇನೆ’ ಎಂದು ವಿವರಿಸಿದರು.

‘ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂಬುದೇ ನಮ್ಮ ಗುರಿ. ವಿನಯವತಿ ಎಂ.ಎ.ಯ ನಾಲ್ಕು ಸೆಮಿಸ್ಟರ್‌ಗಳಲ್ಲಿಯೂ ಪ್ರಥಮ ಸ್ಥಾನ ಪಡೆದು ನಾಲ್ಕು ಚಿನ್ನದ ಪದಕ ಗಳಿಸಿದ್ದಾಳೆ. ಇದಕ್ಕಿಂತ ಸಂತೋಷದ ವಿಚಾರ ಹೆತ್ತವರಿಗೆ ಏನಿದೆ? ಅವರು ಕೆಎಎಸ್‌ ಬರೆಯಬೇಕು ಎಂಬುದು ನನ್ನ ಆಸೆ. ಮತ್ತೆ ಅವಳ ಇಷ್ಟ’ ಎನ್ನುತ್ತಾರೆ ವಿನಯವತಿಯ ತಂದೆ ವಕೀಲ ಮತ್ತು ಕೃಷಿಕ ಆಗಿರುವ ವೇಮನಂದ ಕೆ.ಟಿ.

‘ಮಗಳು ಶಿಕ್ಷಕಿಯಾಗಿ ಪಾಠ ಮಾಡಬೇಕು. ಅವಳಿಗೆ ಏನಾಗಬೇಕೋ ಅದಾಗಲಿ’ ಎಂದು ತಾಯಿ ಕಲ್ಪನಾ ಬಿ. ಸಂತಸಪಟ್ಟರು.

ಈ ದಂಪತಿಯ ಮತ್ತಿಬ್ಬರು ಮಕ್ಕಳು ಕೂಡ ಓದಿನಲ್ಲಿ ಪ್ರತಿಭಾವಂತರು. ಮಗ ವೇಮವಂಶಿ ಕೆ.ವಿ. ಕಳೆದ ವರ್ಷ 112ನೇ ರ‍್ಯಾಂಕ್‌ ಪಡೆದು ಈಗ ಸಿವಿಲ್‌ ಎಂಜಿನಿಯರಿಂಗ್‌ ಮಾಡುತ್ತಿದ್ದಾರೆ. ಬಿಕಾಂನಲ್ಲಿ ರ‍್ಯಾಂಕ್‌ ಪಡೆದಿರುವ ಮಗಳು ವತ್ಸಲ ಕೆ.ವಿ. ಎಂ.ಕಾಂ ಓದುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.