ADVERTISEMENT

ಸರ್ಕಾರದ ವೈಫಲ್ಯವೇ ಕಾರಣ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಮೇ 2022, 16:21 IST
Last Updated 9 ಮೇ 2022, 16:21 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಆಜಾನ್‌ ನೀಡಲು ಧ್ವನಿವರ್ಧಕ ಬಳಸುವ ವಿಷಯವನ್ನು ಕೆಲವರು ಉದ್ದೇಶಪೂರ್ವಕವಾಗಿ ಕೆದಕಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಅದನ್ನು ಜಾರಿಗೊಳಿಸಲು ಪೊಲೀಸರು ನೋಟಿಸ್‌ ನೀಡಿದ್ದಾರೆ. ಈಗ ಇದೇ ವಿಚಾರದಲ್ಲಿ ಸಂಘರ್ಷ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ನಿಯಂತ್ರಣ ಮಾಡದಿದ್ದರೆ ರಾಜ್ಯದಲ್ಲಿ ಅಶಾಂತಿ, ಕೋಮು ಸಂಘರ್ಷ ಹೆಚ್ಚುತ್ತದೆ’ ಎಂದರು.

ಶಾಂತಿ ಕದಡದಂತೆ ಎಚ್ಚರ ವಹಿಸುವುದು ಸರ್ಕಾರದ ಜವಾಬ್ದಾರಿ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

‘ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಕಾಂಗ್ರೆಸ್‌ನ ಕಾರ್ಯಸೂಚಿಗಳು’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಬಿಜೆಪಿ ಸರ್ಕಾರದಲ್ಲಿನ ಅಕ್ರಮ, ಭ್ರಷ್ಟಾಚಾರದ ಪ್ರಕರಣಗಳು ನಿತ್ಯವೂ ಹೊರಬರುತ್ತಿವೆ. ಸರ್ಕಾರಿ ಹುದ್ದೆಗೆ ಎಷ್ಟೆಷ್ಟು ದರ ನಿಗದಿಯಾಗಿದೆ ಎಂಬುದು ಭಾನುವಾರದ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲವೆ’ ಎಂದು ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿದರು.

‘ಇಷ್ಟೊಂದು ಭ್ರಷ್ಟಾಚಾರದ ಮಸಿ ಬಳಿದುಕೊಂಡಿರುವ ಬಿಜೆಪಿಯವರಿಗೆ ಜನರು ಹಾದಿ, ಬೀದಿಯಲ್ಲಿ ಉಗಿಯುತ್ತಿದ್ದಾರೆ. ಜನರಿಗೆ ಮುಖ ತೋರಿಸಲು ಅವರಿಗೆ ಆಗುತ್ತಿಲ್ಲ. ಮೊದಲು ಅವರು ತಮ್ಮ ಮುಖವನ್ನು ತೊಳೆದುಕೊಳ್ಳಲಿ. ನಂತರ ನಮ್ಮ ಬಗ್ಗೆ ಮಾತನಾಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.