ADVERTISEMENT

ಎಚ್‌1 ಎನ್‌1:ಶಿವಮೊಗ್ಗದಲ್ಲೇ 66 ಜನರಲ್ಲಿ ಪತ್ತೆ

ರಾಜ್ಯದ 10 ಮಂದಿ ಸಾವು; ರೋಗಿಗಳ ಸಂಖ್ಯೆ 652ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 19:11 IST
Last Updated 20 ಅಕ್ಟೋಬರ್ 2018, 19:11 IST

ಬೆಂಗಳೂರು: ಬಿಬಿಎಂಪಿ ಹಾಗೂ ಬೆಂಗಳೂರು ನಗರ ಬಿಟ್ಟರೆ, ರಾಜ್ಯದಲ್ಲಿ ಅತಿಹೆಚ್ಚು ಎಚ್‌1 ಎನ್‌1 ರೋಗಿಗಳು ಇರುವುದು ಶಿವಮೊಗ್ಗದಲ್ಲಿ!

‘ಶಿವಮೊಗ್ಗದಲ್ಲಿ ಪ್ರಕರಣಗಳು ಹೆಚ್ಚಿದ್ದು, ಹರಡುವಿಕೆ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.’ ಎಂದು ವಾಹಕಗಳ ಮೂಲಕ ಹರಡುವ ರೋಗಗಳ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದ (ಎನ್‌ವಿಬಿಡಿಸಿಪಿ) ಜಂಟಿ ನಿರ್ದೇಶಕ ಡಾ. ಸಜ್ಜನ್‌ ಶೆಟ್ಟಿ ತಿಳಿಸಿದರು.

‘ರಾಜ್ಯದಲ್ಲಿ 10 ಮಂದಿ ಈಗಾಗಲೇ ಎಚ್‌1 ಎನ್‌1ನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. ಮಂಡ್ಯದ ಪ್ರಕರಣ ಸೇರಿದಂತೆ ಇತ್ತೀಚೆಗೆ ಮೃತಪಟ್ಟವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ಆ ವರದಿ ಇನ್ನೂ ಬಂದಿಲ್ಲ’ ಎಂದು ಅವರು ಹೇಳಿದರು.

ADVERTISEMENT

ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಲ್ಲಿ 78 ಎಚ್‌1 ಎನ್‌1 ರೋಗಿಗಳು ಪತ್ತೆಯಾಗಿದ್ದಾರೆ. ಅಕ್ಟೋಬರ್‌ 16ರ ಹೊತ್ತಿಗೆ 584 ಇದ್ದ ಪ್ರಕರಣಗಳು ಶನಿವಾರಕ್ಕೆ 652ಕ್ಕೆ ಏರಿಕೆ ಕಂಡುಬಂದಿದೆ.

‘ನಾಲ್ಕೇ ದಿನಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿಲ್ಲ. ಕೆಲವರ ರಕ್ತ ಮಾದರಿಯ ಫಲಿತಾಂಶ ಈ ವಾರದಲ್ಲಿ ಬಂದಿದೆ. ಹೀಗಾಗಿ, ಈ ವಾರ ಹೆಚ್ಚಾದಂತೆ ಅನಿಸುತ್ತಿದೆ. ಅಲ್ಲದೇ ಮಳೆಯ ಕಾರಣದಿಂದಲೂ ಈ ವಾರ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ’ ಎಂದು ಸಜ್ಜನ್‌ ಶೆಟ್ಟಿ ಹೇಳಿದರು.

ಉಡುಪಿಯಲ್ಲಿ ನಾಲ್ಕು ಪ್ರಕರಣ: ಶನಿವಾರ ಒಂದೇ ದಿನ ಉಡುಪಿಯಲ್ಲಿ ನಾಲ್ಕು ಮಂದಿ ಎಚ್‌1 ಎನ್‌1ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತುಮಕೂರು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ತಲಾ ಮೂರು ಮಂದಿ ಈ ರೋಗಕ್ಕೆ ತುತ್ತಾಗಿದ್ದಾರೆ.

ಶಿವಮೊಗ್ಗದಲ್ಲಿ ರೋಗಿಗಳು ಹೆಚ್ಚಿರಬಹುದು, ಅದೃಷ್ಟವಶಾತ್‌ ಸಾವು ನೋವು ಆಗಿಲ್ಲ. ಎಚ್‌1ಎನ್‌1 ರೋಗಿಗಳನ್ನು ಪ್ರತ್ಯೇಕವಾಗಿ ಇಡಲಾಗಿದೆ
-ಶಂಕರಪ್ಪ
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.