ADVERTISEMENT

ಪಚ್ಚನಾಡಿ: ಆಸ್ತಿ ಅಡಮಾನ ಇಟ್ಟು ಪರಿಹಾರ ಪಾವತಿಸಿ

ಮಂಗಳೂರು ಪಾಲಿಕೆಗೆ ಅನುಮತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 5:13 IST
Last Updated 15 ಅಕ್ಟೋಬರ್ 2020, 5:13 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಪಚ್ಚನಾಡಿ ನೆಲಭರ್ತಿ ಘಟಕದಲ್ಲಿ ಸಂಭವಿಸಿದ ಭೂಕುಸಿತದಿಂದ ತೊಂದರೆಗೆ ಸಿಲುಕಿದವರಿಗೆ ಪರಿಹಾರ ನೀಡಲು ಹಣ ಬಿಡುಗಡೆ ಮಾಡಿ, ಇಲ್ಲವೇ ಆಸ್ತಿ ಅಡಮಾನ ಇಡಲು ಮಂಗಳೂರು ನಗರ ಪಾಲಿಕೆಗೆ ಅನುಮತಿ ನೀಡಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

‘ನ್ಯಾಯಾಲಯ ವಿಚಾರಣೆ ಆರಂಭಿಸಿದ ನಂತರ 35 ನಿವಾಸಿಗಳಿಗೆ ಪರಿಹಾರ ನೀಡಲಾಗಿದೆ. ಈ ಸಮಸ್ಯೆ ಪರಿಹರಿಸಲು ₹22 ಕೋಟಿ ಅಗತ್ಯವಿದೆ ಎಂದು ಕೋರಿದ್ದರೂ, ರಾಜ್ಯ ಸರ್ಕಾರ ₹8 ಕೋಟಿ ಬಿಡುಗಡೆ ಮಾಡಿದೆ’ ಎಂದು ಮಂಗಳೂರು ಪಾಲಿಕೆ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿತು.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಬೆಳೆ ಮತ್ತು ಮರ ಹಾನಿಗೆ ಮಾತ್ರ ಪರಿಹಾರ ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ವಿಚಾರಣೆಯನ್ನು ಔಪಚಾರಿಕ ಎಂದಷ್ಟೇ ಸರ್ಕಾರ ಭಾವಿಸಿದೆ ಎಂಬುದನ್ನು ದಾಖಲೆಗಳು ಸೂಚಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ADVERTISEMENT

ಹೆಚ್ಚುವರಿ ಅಫಿಡವಿಟ್ ಗಮನಿಸಿದರೆ ಪರಿಹಾರಕ್ಕೆ ಹಕ್ಕು ಸಲ್ಲಿಸಲು ಅವಕಾಶ ನೀಡಲಾಗಿದೆ ಎಂಬುದೂ ತೋರುತ್ತಿಲ್ಲ. ಸಂತ್ರಸ್ತರು ತಮ್ಮ ಹಕ್ಕು ಸಲ್ಲಿಸಲು ಸಾರ್ವಜನಿಕ ನೋಟಿಸ್ ಪ್ರಕಟಿಸುವಂತೆ ‍ಮಂಗಳೂರು ಪಾಲಿಕೆಗೆ ಪೀಠ ನಿರ್ದೇಶನ ನೀಡಿತು.

‘‍ಪರಿಹಾರ ಪಾವತಿಸಲು ಹಣ ಇಲ್ಲ ಎಂದು ಪಾಲಿಕೆ ಹೇಳುತ್ತಿದ್ದರೆ, ತನ್ನ ಸ್ವಂತ ಆದಾಯದಲ್ಲಿ ಭರಿಸಿಕೊಳ್ಳಲಿ ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ, ತನ್ನ ಆಸ್ತಿ ಅಡಮಾನ ಇಡಲು ಪಾಲಿಕೆಗೆ ಸರ್ಕಾರ ಅನುಮತಿ ನೀಡಬೇಕು. ಇಲ್ಲವೇ ಹಣ ಬಿಡುಗಡೆ ಮಾಡಬೇಕು. ಈ ಸಂಬಂಧ ತನ್ನ ನಿಲುವು ಸ್ಪಷ್ಟಪಡಿಸಬೇಕು’ ಎಂದು ಹೇಳಿತು.‌‌

‘ಪರಿಹಾರ ನೀಡುವ ಸಂಬಂಧ ಪಾಲಿಕೆ ಆಯುಕ್ತರು ಒಂದು ವಾರದಲ್ಲಿ ಅಫಿಡವಿಟ್ ಸಿದ್ಧಪಡಿಸಿಕೊಂಡು ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು’ ಎಂದು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.